ಥಾಯ್ಲೆಂಡ್: ಮಧ್ಯ ಥಾಯ್ಲೆಂಡ್ನ ನಖೋನ್ ನಾಯೊಕ್ ಪ್ರಾಂತ್ಯದ ಖಾವೊ ಯಾಯ್ ರಾಷ್ಟ್ರೀಯ ಉದ್ಯಾನದಲ್ಲಿ, ಪಶುವೈದ್ಯರು, ರಾಷ್ಟ್ರೀಯ ಉದ್ಯಾನದ ಸಿಬ್ಬಂದಿ ಮತ್ತು ಸ್ವಯಂಸೇವಕರ ತಂಡವು ಆನೆ ಮರಿ ಮತ್ತು ಅದರ ತಾಯಿಯನ್ನು ರಕ್ಷಿಸಿದ್ದಾರೆ.
ಉದ್ಯಾನದ ಅಧಿಕಾರಿಗಳ ಪ್ರಕಾರ, ಒಂದು ವರ್ಷದ ಆನೆ ಮರಿ ದೊಡ್ಡ ಹೊಂಡವೊಂದಕ್ಕೆ ಬಿದ್ದಿದ್ದು, ಇದನ್ನು ಮೇಲೆತ್ತಲಾಗದೇ ಅದರ ತಾಯಿ ಅಲ್ಲೇ ಅಲೆದಾಡುತ್ತಿತ್ತು. ಇದನ್ನು ಅರಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅರಿವಳಿಕೆ ಮದ್ದನ್ನು ನೀಡಿ ತಾಯಿ ಆನೆಯನ್ನು ಮೊದಲು ಪ್ರಜ್ಞೆತಪ್ಪಿಸಿದ್ದಾರೆ. ದುರಂತ ಎಂದರೆ, ಈ ವೇಳೆ ಆನೆಯ ದೇಹದ ಅರ್ಧ ಭಾಗ ಹೊಂಡದಲ್ಲಿ ಬಿದ್ದರೆ ಇನ್ನರ್ಧ ಹೊರಗೆ ಇತ್ತು.
ಅಪಾಯದಲ್ಲಿದ್ದ ತಾಯಿ - ಮಗು ಆನೆಯನ್ನು ರಕ್ಷಿಸಿದ ಸಿಬ್ಬಂದಿ ಈ ವೇಳೆ ಹೊಂಡದಲ್ಲಿದ್ದ ಆನೆ ಮರಿಗೆ ಸಂಕಷ್ಟ ಎದುರಾಗಿತ್ತು. ನಂತರ ರಕ್ಷಣಾ ತಂಡವು ಕ್ರೇನ್ ಬಳಸಿ ತಾಯಿ ಆನೆಯನ್ನು ಹೊಂಡದಿಂದ ಪಕ್ಕಕ್ಕೆ ಸರಿಸಲಾಯಿತು. ನಂತರ ಕ್ರೇನ್ ಸಹಾಯದಿಂದ ಮರಿ ಆನೆಯನ್ನು ಹೊಂಡದಿಂದ ಮೇಲೆತ್ತಲಾಯಿತು.
ಈ ದೃಶ್ಯದ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. ರಕ್ಷಣಾ ತಂಡದ ಸದಸ್ಯರು ಆನೆಯನ್ನು ಎಚ್ಚರಿಸಲು ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನಡೆಸುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಹೊಂಡದಿಂದ ಹೊರಬಂದ ಆನೆಯ ಮರಿ ಸಹ ತನ್ನ ತಾಯಿಯ ಬಳಿ ಬಂದು ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದೆ. ನಂತರ ಆನೆಯು ಎಚ್ಚರಗೊಂಡು ತನ್ನ ಮಗುವಿನೊಂದಿಗೆ ಕಾಡಿನ ಕಡೆ ಹೆಜ್ಜೆಹಾಕಿದೆ.
ಇದನ್ನೂ ಓದಿ: ಕಾಡ್ಗಿಚ್ಚಿಗೆ ಧಗಧಗಿಸುತ್ತಿದೆ ಪೋರ್ಚುಗಲ್ ಅರಣ್ಯ; ವಿಮಾನ ಅಪಘಾತದಲ್ಲಿ ಪೈಲಟ್ ಸಾವು