ಸ್ಯಾನ್ ಸಾಲ್ವಡಾರ್ : ಬಾರ್ಬಿ ಬಗ್ಗೆ ಜನರಿಗೆ ಮೊದಲಿನಿಂದಲೂ ಕ್ರೇಜ್ ಇತ್ತು. ಆದರೆ, ಆಕೆಯ ಕುರಿತಾದ ಚಿತ್ರ ಬಿಡುಗಡೆಯಾದ ನಂತರ ಬಾರ್ಬಿ ಕ್ರೇಜ್ ಮತ್ತಷ್ಟು ಅಧಿಕವಾಗಿದೆ. ನಟಿ ಮಾರ್ಗಾಟ್ ರಾಬಿ ಮತ್ತು ರಿಯಾನ್ ಗೊಸ್ಲಿಂಗ್ ನಟಿಸಿರುವ ಬಾರ್ಬಿ ಸಿನಿಮಾವು ಜಗತ್ತಿನಾದ್ಯಂತ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಈ ಬೆನ್ನಲ್ಲೇ ಬಾರ್ಬಿ ಟ್ರೆಂಡ್ನ ಪ್ರಯೋಜನ ಪಡೆಯಲು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಹೊಸ ಟ್ರೆಂಡ್ಗಳು ಪ್ರಾರಂಭವಾಗಿದೆ.
ಹೌದು, ಬಾರ್ಬಿ ಸಿನೆಮಾ ಚಿತ್ರಮಂದಿರಕ್ಕೆ ಬಂದಾಗಿನಿಂದಲೂ ಗುಲಾಬಿ ಬಣ್ಣದ ಟ್ರೆಂಡ್ ಆರಂಭವಾಗಿದೆ. ಈ ಸಿನಿಮಾದ ಕ್ರೇಜ್ ಎಷ್ಟು ಹೆಚ್ಚಿದೆ ಅಂದರೆ ಇದೀಗ ಶವಸಂಸ್ಕಾರದ ಪೆಟ್ಟಿಗೆಗಳು ಸಹ ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡುತ್ತಿವೆ. ಒಲಿವಾರೆಸ್ ಫ್ಯೂನರಲ್ ಹೋಮ್ ಬಾರ್ಬಿ ಪರಿಕಲ್ಪನೆಯಲ್ಲಿ ಶವಪೆಟ್ಟಿಗೆಗಳನ್ನು ಪರಿಚಯಿಸಿದೆ. ಆಕರ್ಷಕ ಬೆಲೆ ಹಾಗೂ ಗುಲಾಬಿ ಬಣ್ಣದ ಜೊತೆ ಕ್ಯಾಸ್ಕೆಟ್‌ಗಳ ಮೇಲೆ 'ನೀವು ಬಾರ್ಬಿಯಂತೆ ವಿಶ್ರಾಂತಿ ಪಡೆಯಬಹುದು'ಎಂದು ಬರೆಯಲಾಗಿದೆ.
ಕಂಪನಿಯು ಪ್ರಚಾರದ ವಿಡಿಯೋವನ್ನು ಸಹ ಮಾಡಿದೆ. ಇದರಲ್ಲಿ ಶವಪೆಟ್ಟಿಗೆಯನ್ನು ಪ್ರಕಾಶಮಾನವಾದ ಗುಲಾಬಿ ಬಣ್ಣದಲ್ಲಿ ತೋರಿಸಲಾಗಿದೆ. ಈ ಬಣ್ಣವು ನಿಮ್ಮ ಜೀವನದಲ್ಲಿ ಶಕ್ತಿಯನ್ನು ಸಂಕೇತಿಸುತ್ತದೆ. ಈ ಗಾಢವಾದ ಗುಲಾಬಿ ವರ್ಣವು ಪ್ರೀತಿ, ಚೈತನ್ಯ, ಶಕ್ತಿ ಮತ್ತು ರೋಮಾಂಚನ ಸಾಂಕೇತಿಸುತ್ತದೆ ಎಂದು ತಿಳಿಸಿದೆ.
ಇನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿಲ್ಲೆಗಾಸ್ ಫ್ಯೂನರಲ್ ಹೋಮ್ ಈ ವಿಶೇಷ ಶವಪೆಟ್ಟಿಗೆಯ ಮೇಲೆ 30 ಪ್ರತಿಶತ ರಿಯಾಯಿತಿ ನೀಡಿದೆ. ವಿನ್ಯಾಸದ ಬಗ್ಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 10 ಹೊಸ ಗ್ರಾಹಕರಿಗೆ ಪಿಂಕ್ ಶವಪೆಟ್ಟಿಗೆ ನೀಡಲಾಗಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಶವಪೆಟ್ಟಿಗೆಗಳ ದಾಸ್ತಾನು ಮುಗಿದಿದೆ. ಇನ್ನೊಂದೆಡೆ, ಬಾರ್ಬಿ ಚಲನಚಿತ್ರದ ಮಾರ್ಕೆಟಿಂಗ್ ತಂಡವು ಪ್ರಚಾರ ನಡೆಸಲು ಯುಎಇ-ಆಧಾರಿತ ಸಾಮಾಜಿಕ ಮಾಧ್ಯಮ ಸಂಸ್ಥೆ ಐ ಸ್ಟುಡಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ :ಬಾರ್ಬಿ ಮತ್ತು ಕೆನ್ ಪಾತ್ರದಲ್ಲಿ ಹೃತಿಕ್ ರೋಷನ್ - ಕಂಗನಾ ರಣಾವತ್ ಮೋಡಿ : ವಿಡಿಯೋ ನೋಡಿ
ಹಾಗೆಯೇ, ಪ್ರಪಂಚದಾದ್ಯಂತ ಕೆಲ ಸೆಲೆಬ್ರಿಟಿಗಳು ಕೂಡ ಬಾರ್ಬಿಕೋರ್ ಪ್ರವೃತ್ತಿಯನ್ನು ಫಾಲೋ ಮಾಡುತ್ತಿದ್ದಾರೆ. ಬಾರ್ಬಿ - ಥೀಮಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮನರಂಜನೆ ನೀಡುತ್ತಿದ್ದಾರೆ.
ಬಾರ್ಬಿ ಸಿನಿಮಾ ಬಗ್ಗೆ :ಹಾಲಿವುಡ್ ನಿರ್ದೇಶಕಿ ಗ್ರೆಟಾ ಗೆರ್ವಿಗ್ ನಿರ್ದೇಶನದ 'ಬಾರ್ಬಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜುಲೈ 21 ರಂದು (ಶುಕ್ರವಾರ) ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಯಾಗಿದೆ. ಭಾರಿ ಮೊತ್ತವನ್ನು ಕೂಡ ಕಲೆ ಹಾಕಿ ತನ್ನ ಓಟವನ್ನು ಮುಂದುವರೆಸಿದೆ. ಕೆನ್ ಆಗಿ ರಯಾನ್ ಗೊಸ್ಲಿಂಗ್ ಕಾಣಿಸಿಕೊಂಡಿದ್ದು, ಮಾರ್ಗಾಟ್ ರಾಬಿ ನಾಯಕಿಯಾಗಿ ಮಿಂಚಿದ್ದಾರೆ. ಈ ಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಪಡೆಯುತ್ತಿದೆ.