ಲಂಡನ್ :ಪಾಕಿಸ್ತಾನದಲ್ಲಿ ಅಕ್ಟೋಬರ್ನಲ್ಲಿ ಚುನಾವಣೆ ನಡೆಯಲಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ಮುನ್ಸೂಚನೆ ನೀಡಿದೆ. ಅಕ್ಟೋಬರ್ ಮುಂಚೆ ದೇಶದಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆ ಕಡಿಮೆ ಇದ್ದು, ಪ್ರಸ್ತುತ ಆಡಳಿತದಲ್ಲಿರುವ ಮೈತ್ರಿಕೂಟ ಸರ್ಕಾರದ ವಿರುದ್ಧ ಜನತೆ ವ್ಯಾಪಕ ಅಸಮಾಧಾನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಭದ್ರತೆ ದುರ್ಬಲವಾಗಿದೆ ಮತ್ತು ಆರ್ಥಿಕ ಬೆಳವಣಿಗೆಯು 2023 ರಲ್ಲಿ ವಾಸ್ತವಿಕವಾಗಿ ನಿಧಾನವಾಗಲಿದೆ ಎಂದು ಎಕನಾಮಿಸ್ಟ್ ಗ್ರೂಪ್ EIU ನ ವಿಶ್ಲೇಷಣಾ ವಿಭಾಗ ತಿಳಿಸಿದೆ.
ಪಾಕಿಸ್ತಾನದಲ್ಲಿ 2023 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಅಲ್ಲಿ ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಆಡಳಿತಾರೂಢ ಪಿಎಂಎಲ್ - ಎನ್ ಒಕ್ಕೂಟದ ಮೇಲೆ ಜನರಿಗೆ ವ್ಯಾಪಕ ಅಸಮಾಧಾನವಿರುವ ಕಾರಣದಿಂದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಮತ್ತೆ ಗೆಲ್ಲಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವರದಿ ಹೇಳಿದೆ. ಅದೇನೇ ಆದರೂ ಪಾಕಿಸ್ತಾನದಲ್ಲಿನ ರಾಜಕೀಯ ಸ್ಥಿತಿ ಹಿಂಸಾತ್ಮಕವಾಗಿಯೇ ಮುಂದುವರಿಯಲಿದೆ ಎನ್ನಲಾಗಿದೆ.
EIU ಪಾಕಿಸ್ತಾನ ಸೇರಿದಂತೆ ಥೈಲ್ಯಾಂಡ್ ರಾಜಕೀಯದ ಬಗ್ಗೆಯೂ ಮುನ್ಸೂಚನೆ ನೀಡಿದೆ. ಎರಡೂ ದೇಶಗಳಲ್ಲಿ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆಗಳು ನಡೆಯಲಿದೆ. ಥೈಲ್ಯಾಂಡ್ನಲ್ಲಿ ಕೂಡ ಸದ್ಯದ ಪ್ರತಿಪಕ್ಷವು ಜಯಶಾಲಿಯಾಗಲಿದೆ ಎಂದು ವರದಿ ಹೇಳಿದೆ. ರಾಜಕೀಯ ಅಸ್ಥಿರತೆಯು ಮಿಲಿಟರಿ ಹಸ್ತಕ್ಷೇಪಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಎರಡೂ ದೇಶಗಳ ಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಸದ್ಯ ಚಾಲ್ತಿಯಲ್ಲಿರುವ ಅಸೆಂಬ್ಲಿಯ ಅವಧಿ ಆಗಸ್ಟ್ಗೆ ಕೊನೆಗೊಳ್ಳಲಿದೆ. ಅದರ ನಂತರ ಅಕ್ಟೋಬರ್ನಲ್ಲಿ ಚುನಾವಣೆ ನಡೆಯಬಹುದು. ಆದರೆ ಸದ್ಯ ದೇಶದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನೋಡಿದರೆ ಅದಕ್ಕೂ ಮೊದಲೇ ಚುನಾವಣೆಗಳು ನಡೆದರೂ ಆಶ್ಚರ್ಯವಿಲ್ಲ. ಪಾಕಿಸ್ತಾನವು ತನ್ನ ವಿದೇಶಿ ಸಾಲಗಳನ್ನು ತೀರಿಸಲಾಗದೆ ಪರದಾಡುತ್ತಿದೆ. ಈ ಬಿಕ್ಕಟ್ಟು ಶಮನ ಮಾಡಬೇಕಾದರೆ ಜನರಿಗೆ ತೀರಾ ಹೊರೆಯಾಗಬಹುದಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಒಟ್ಟಾರೆಯಾಗಿ ಇಮ್ರಾನ್ ಕಾನ್ ಮತ್ತೊಮ್ಮೆ ಗೆದ್ದು ಪ್ರಧಾನಿಯಾಗುವ ಎಲ್ಲ ಸಾಧ್ಯತೆ ಇದ್ದು, ಅವರೇ ಐಎಂಎಫ್ನೊಂದಿಗೆ ಮತ್ತೆ ಮಾತುಕತೆ ನಡೆಸಬೇಕಾಗುತ್ತದೆ ಎಂದು ವರದಿ ಹೇಳಿದೆ.
ಮತ್ತೆ ಕಾಶ್ಮೀರ ವಿಷಯ ಎತ್ತಿದ ಪಾಕ್: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ (ಯುಎನ್) ರಾಯಭಾರಿಯು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ನಂತರ ಭಾರತವು ಪಾಕಿಸ್ತಾನದ ಮೇಲೆ ಹರಿಹಾಯ್ದಿದೆ. ಯಾವುದೇ ಭಾಷಣ ಮತ್ತು ಪ್ರಚಾರದಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತ ದೇಶದ ಅವಿಭಾಜ್ಯ ಅಂಗವಾಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಯುಎನ್‌ಜಿಎ ಸಭೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮುನೀರ್ ಅಕ್ರಂ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ ನಂತರ ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್‌ನಲ್ಲಿನ ಸಲಹೆಗಾರ ಪ್ರತೀಕ್ ಮಾಥುರ್ ಪಾಕಿಸ್ತಾನಕ್ಕೆ ಖಾರವಾದ ಮಾತುಗಳಲ್ಲಿಯೇ ತಿರುಗೇಟು ನೀಡಿದರು.
ಇದನ್ನೂ ಓದಿ : ಕರೆಂಟಿರಲಿಲ್ಲ, ನೀರಿರಲಿಲ್ಲ.. ಹೇಗೋ ಬದುಕಿದ್ದೆವು: ಸುಡಾನ್ನಿಂದ ಬಂದವರ ಮಾತು