ಕೈರೋ( ಈಜಿಪ್ಟ್): ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿನ ಪ್ಯಾಲೆಸ್ಟೈನಿಯರನ್ನು ತನ್ನ ದೇಶದ ಗಡಿಯಲ್ಲಿರುವ ಸಿನಾಯ್ ಪರ್ಯಾಯ ದ್ವೀಪಕ್ಕೆ ಬಲವಂತವಾಗಿ ಸ್ಥಳಾಂತರಿಸುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಈಜಿಪ್ಟ್ ಪುನರುಚ್ಚರಿಸಿದೆ. ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮುಸ್ತಫಾ ಮಡ್ಬೌಲಿ, "ಪ್ಯಾಲೆಸ್ಟೈನ್ ಸಮಸ್ಯೆಗೆ ಸೂಕ್ತ ಪರಿಹಾರವಿಲ್ಲದೆ ಆ ವಿಷಯದಲ್ಲಿ ನಾವೇನೂ ಮಾಡಲಾರೆವು. ಯಾವುದೇ ಸಂದರ್ಭದಲ್ಲಿ ಈಜಿಪ್ಟ್ ಈ ಸಮಸ್ಯೆಯ ಭಾಗವಾಗಲು ಬಯಸುವುದಿಲ್ಲ" ಎಂದು ಒತ್ತಿ ಹೇಳಿದರು.
"ಈಜಿಫ್ಟ್ನ ಪ್ರದೇಶಗಳಿಗೆ ಪ್ಯಾಲೆಸ್ಟೈನಿಯರ ಸ್ಥಳಾಂತರಕ್ಕೆ ಸಂಬಂಧಿಸಿದ ಯಾವುದೇ ಸಂದರ್ಭದಲ್ಲಿ ಈಜಿಪ್ಟ್ ತನ್ನ ಗಡಿಗಳನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಅವರು ಹೇಳಿದರು. "ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಅಮಾನವೀಯ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸದಿದ್ದರೆ ಇಡೀ ಪ್ರದೇಶದ ಭದ್ರತೆ ಮತ್ತು ಸ್ಥಿರತೆ ದುರ್ಬಲವಾಗಲಿದೆ ಮತ್ತು ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಬಹುದು" ಎಂದು ಮಡ್ಬೌಲಿ ತಿಳಿಸಿದರು.
"ಇಸ್ರೇಲ್ನೊಂದಿಗಿನ ಶಾಂತಿ ಒಪ್ಪಂದವನ್ನು ಪಾಲಿಸುವ ವಿಷಯದಲ್ಲಿ ಈಜಿಪ್ಟ್ನ ನಿಲುವು ಮೊದಲಿನಂತೆಯೇ ಇದೆ ಮತ್ತು ಪ್ರತಿಯಾಗಿ ಇಸ್ರೇಲ್ನಿಂದ, ವಿಶೇಷವಾಗಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ನ ಕಾರ್ಯಾಚರಣೆ ಮತ್ತು ಅದರಿಂದ ಈಜಿಪ್ಟ್ಗೆ ಎದುರಾಗಬಹುದಾದ ಪರೋಕ್ಷ ಅಪಾಯಗಳಿಗೆ ಸಂಬಂಧಿಸಿದಂತೆ ಅದೇ ರೀತಿಯ ಪ್ರತಿಕ್ರಿಯೆಯನ್ನು ಎದುರು ನೋಡುತ್ತೇವೆ" ಎಂದು ಅವರು ಹೇಳಿದರು.