ಕ್ವಿಟೋ(ಈಕ್ವೆಡಾರ್):ಜೈಲಿನಲ್ಲಿ ಗ್ಯಾಂಗ್‌ವಾರ್ ನಡೆದು ಸುಮಾರು 20 ಜನರು ಸಾವನ್ನಪ್ಪಿ, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ರಾಜಧಾನಿ ಕ್ವಿಟೋದಿಂದ ಸುಮಾರು 310 ಕಿಲೋಮೀಟರ್ ದೂರದಲ್ಲಿರುವ ತುರಿ ಎಂಬಲ್ಲಿರುವ ಜೈಲಿನಲ್ಲಿ ಘರ್ಷಣೆ ಸಂಭವಿಸಿದೆ ಎಂದು ಗೃಹ ಸಚಿವ ಪ್ಯಾಟ್ರಿಸಿಯೊ ಕ್ಯಾರಿಲ್ಲೊ ತಿಳಿಸಿದ್ದಾರೆ.
ಬಂದೂಕುಗಳು ಮತ್ತು ಚಾಕುಗಳಿಂದ ಪರಸ್ಪರ ದಾಳಿ ನಡೆದಿದೆ. ಸತ್ತವರಲ್ಲಿ ಐವರ ದೇಹವನ್ನು ವಿರೂಪಗೊಳಿಸಲಾಗಿದೆ. ಆರು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಕನಿಷ್ಠ ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ಯಾಟ್ರಿಸಿಯೊ ಕ್ಯಾರಿಲ್ಲೊ ಹೇಳಿದರು. ರೇಡಿಯೊ ಡೆಮಾಕ್ರಸಿ ಎಂಬ ರೇಡಿಯೋದೊಂದಿಗೆ ಮಾತನಾಡಿದ ಅವರು 'ಕ್ರಿಮಿನಲ್ ಎಕಾನಮಿ' ರಾಜಕೀಯದೊಂದಿಗೆ ಲಿಂಕ್ ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.