ಕ್ವಿಟೊ: ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈಕ್ವೆಡಾರ್‌ನಲ್ಲಿ 14 ಮಂದಿ, ಪೆರುವಿನಲ್ಲಿ ಒಬ್ಬರು ಸೇರಿ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 126 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ತೀವ್ರತೆಯಿಂದಾಗಿ ಹಲವು ಕಟ್ಟಡಗಳು ಧರೆಗುರುಳಿವೆ. ಜನರು ಮನೆ ಬಿಟ್ಟು ಬೀದಿಗೆ ಬಂದಿದ್ದಾರೆ. ಉತ್ತರ ಪೆರುವಿನಲ್ಲೂ ಭೂಕಂಪನ ಅನುಭವವಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ರಕ್ಷಿಸುತ್ತಿದ್ದಾರೆ. ದೇಶದ ಕರಾವಳಿ ಗುವಾಯಾಸ್ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈಕ್ವೆಡಾರ್ನ 2ನೇ ದೊಡ್ಡ ನಗರವಾದ ಗುವಾಕ್ವಿಲ್ನ ದಕ್ಷಿಣಕ್ಕೆ ಸುಮಾರು 50 ಮೈಲಿಗಳ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.
ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರು ರಾಷ್ಟ್ರವನ್ನುದ್ದೇಶಿಸಿ ಟ್ವೀಟ್ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. "ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಹಾನಿಗೆ ಒಳಗಾದವರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗುತ್ತದೆ. ರಕ್ಷಣೆಗೆ ಅಗತ್ಯವಾದ ಸೌಕರ್ಯವನ್ನು ರಕ್ಷಣಾ ಸಿಬ್ಬಂದಿಗೆ ನೀಡಲಾಗುವುದು" ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಟರ್ಕಿ, ಸಿರಿಯಾದಲ್ಲಿ 'ಸಾವಿನ ಭೂಕಂಪ'.. 640 ಜನರ ಬಲಿ ಪಡೆದ ಪ್ರಕೃತಿ.. ಭಾರತದಿಂದ ನೆರವು!
ಭೂಕಂಪದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಭೂಕಂಪವು ದಕ್ಷಿಣ ಈಕ್ವೆಡಾರ್ನಲ್ಲಿರುವ ಹಲವು ಕಟ್ಟಡಗಳಿಗೆ ಹಾನಿಯುಂಟು ಮಾಡಿದೆ. ಸುನಾಮಿಯ ಯಾವುದೇ ಲಕ್ಷಣಗಳಿಲ್ಲ. ಇತ್ತ ಉತ್ತರ ಪೆರುವಿನಲ್ಲೂ ಭೂಮಿ ಕಂಪಿಸಿದ್ದು, ಸದ್ಯ ಅಲ್ಲಿ ಹೆಚ್ಚಿನ ಹಾನಿ, ಅಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈಕ್ವೆಡಾರ್ ಆಗಾಗ ಭೂಕಂಪಗಳಿಗೆ ಗುರಿಯಾಗುತ್ತದೆ. 2016ರಲ್ಲಿ, ದೇಶದ ಹೆಚ್ಚು ವಿರಳವಾದ ಜನಸಂಖ್ಯೆಯ ಪ್ರದೇಶದ ಪೆಸಿಫಿಕ್ ಕರಾವಳಿಯಲ್ಲಿ ಉತ್ತರಕ್ಕೆ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ 600 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇತ್ತೀಚೆಗೆ ಜಗತ್ತಿನ ವಿವಿಧೆಡೆ ಭೂಕಂಪನದ ಬಗ್ಗೆ ವರದಿಯಾಗುತ್ತಿದೆ. ಟರ್ಕಿಯಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಪ್ರಬಲ ಭೂಕಂಪನಕ್ಕೆ ನಲುಗಿದ ಟರ್ಕಿ.. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲು
ನ್ಯೂಜಿಲೆಂಡ್‌ನಲ್ಲಿ ಭೂಕಂಪನ: ಇತ್ತೀಚೆಗೆ ನ್ಯೂಜಿಲೆಂಡ್ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ವರದಿಯಾಗಿತ್ತು. ಮಾ.16ರಂದು ಇಂದು ಬೆಳಗ್ಗೆ 6.40ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (ಯುಎಸ್ಜಿಎಸ್) ಹೇಳಿತ್ತು. ನ್ಯೂಜಿಲೆಂಡ್ನ ಜನವಸತಿ ಪ್ರದೇಶವಲ್ಲದ ಕೆಲವು ಕಡೆಗಳಲ್ಲಿ ಘಟನೆ ನಡೆದಿರುವುದಾಗಿ ತಿಳಿಸಿತ್ತು. ಎರಡನೇ ಭೂಕಂಪನವು 6.55ಕ್ಕೆ ನಡೆದಿರುವುದಾಗಿ ಯುಎಸ್ಜಿಎಸ್ ಮಾಹಿತಿ ನೀಡಿತ್ತು.
ಇದನ್ನೂ ಓದಿ:ನ್ಯೂಜಿಲೆಂಡ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ: ಸುನಾಮಿ ಭೀತಿ ಇಲ್ಲ