ಮಾಲೆ(ಮಾಲ್ಡೀವ್ಸ್):ಮಾಲ್ಡೀವ್ಸ್ನ ಮೂವರು ಸಚಿವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ್ದು, ದೇಶದ ಪ್ರಮುಖ ಆರ್ಥಿಕ ಮೂಲವಾದ ಪ್ರವಾಸೋದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಈಗಾಗಲೇ ಹಲವರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರವಾಸ ನಿರ್ವಹಣಾ ಸಂಸ್ಥೆಯಾದ EaseMyTRip ದ್ವೀಪ ರಾಷ್ಟ್ರಕ್ಕೆ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಿದೆ.
ದೇಶದ ಪ್ರವಾಸ ನಿರ್ವಹಣಾ ಸಂಸ್ಥೆಯಾದ EaseMyTRip "ಮಾಲ್ಡೀವ್ಸ್‌ಗೆ ಭೇಟಿ ನೀಡಲು ಪ್ರವಾಸಿಗರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಅಲ್ಲಿಗೆ ತೆರಳಲು ಮಾಡಿದ್ದ ಬುಕ್ಕಿಂಗ್ ಅನ್ನು ರದ್ದು ಮಾಡಲಾಗಿದೆ" ಎಂದು ತನ್ನ ವೆಬ್ಸೈಟ್ನಲ್ಲಿ ಬರೆದುಕೊಂಡಿದೆ.
ಈಸಿಮೈ ಟ್ರಿಪ್‌ನ ಸಿಇಒ ನಿಶಾಂತ್ ಪಿಟ್ಟಿ ತಮ್ಮ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ನೀಡಿದ್ದು, ದೇಶದೊಂದಿಗಿನ ಬಿಕ್ಕಟ್ಟಿನಿಂದಾಗಿ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಮಾಲ್ಡೀವ್ಸ್‌ಗೆ ತೆರಳುವ ವಿಮಾನ ಬುಕ್ಕಿಂಗ್ಅನ್ನು ನಿಲ್ಲಿಸಲಾಗಿದೆ ಎಂದು ಪ್ರಧಾನಿ ಮೋದಿ, ಲಕ್ಷದ್ವೀಪ, ಸಪೋರ್ಟ್ ಇಂಡಿಯಾ ಹ್ಯಾಷ್ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ ವಿದ್ಯಮಾನಗಳು ಸರಿಯಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸ ಮರು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾಲ್ಡೀವ್ಸ್ ವಿದೇಶಾಂಗ ಸಚಿವ ವಿಷಾದ:ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಮೂಸಾ ಜಮೀರ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಮಾನತಾದ ಸಚಿವರ ಹೇಳಿಕೆಗಳು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯವಲ್ಲ. ಮಾಲ್ಡೀವ್ಸ್ ತನ್ನೆಲ್ಲಾ ನೆರೆಹೊರೆ ರಾಷ್ಟ್ರಗಳೊಂದಿಗೆ ಧನಾತ್ಮಕ ಮತ್ತು ರಚನಾತ್ಮಕ ಸಂಬಂಧವನ್ನು ಬೆಳೆಸಲು ಬದ್ಧವಾಗಿದೆ ಎಂದೂ ಹೇಳಿದ್ದಾರೆ.
ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಕೂಡ ಸಚಿವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಭಾರತದ ವಿರುದ್ಧ ದ್ವೇಷಪೂರಿತ ಭಾಷೆಯ ಬಳಕೆಯು ತಕ್ಕುದಲ್ಲ. ಭಾರತ ದ್ವೀಪ ರಾಷ್ಟ್ರಕ್ಕೆ ಎಂದಿಗೂ ಉತ್ತಮ ಸ್ನೇಹಿತ. ಎರಡು ದೇಶಗಳ ನಡುವಿನ ಹಳೆಯ ಸ್ನೇಹ ಒಡೆಯಲು ಇಂತಹ ಹೇಳಿಕೆಗಳನ್ನು ಬೆಂಬಲಿಸಬಾರದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಜನವರಿ 2ರಂದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ರಮಣೀಯು ಪ್ರಕೃತಿ ಸೊಬಗಿನ ವಿಡಿಯೋವನ್ನು ಹಂಚಿಕೊಂಡಿದ್ದರು. ಇಲ್ಲಿನ ಕಡಲತೀರಗಳು ಪ್ರವಾಸಿಗರನ್ನು ಸೆಳೆಯುತ್ತವೆ ಎಂದು ಕೆಲ ಚಿತ್ರಗಳ ಸಮೇತ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಮಾಲ್ಡೀವ್ಸ್ ಸಚಿವರು ಅಸಮಾಧಾನಗೊಂಡು ಪ್ರಧಾನಿ ಮತ್ತು ಭಾರತವನ್ನು ಲಘುಭಾಷೆಯಲ್ಲಿ ಟೀಕಿಸಿದ್ದರು.
ಇದನ್ನೂ ಓದಿ:ಮಾಲ್ಡೀವ್ಸ್‌ಗೆ ಬಾಯ್ಕಾಟ್ ಬಿಸಿ: ಪರಿಣಾಮ ಮುಂದಿನ ದಿನಗಳಲ್ಲಿ ಗೋಚರ ಎಂದ ಟೂರ್ ಆಪರೇಟರ್ಸ್