ಟೋಕಿಯೋ (ಜಪಾನ್) :ಹೊಸ ವರ್ಷದ ಮೊದಲ ದಿನವೇ ಜಪಾನ್ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆ ದಾಖಲಾಗಿದೆ. ಪ್ರಬಲ ಅಲೆಗಳಿಂದಾಗಿ ಸುನಾಮಿ ಏಳುವ ಸಾಧ್ಯತೆ ಇದೆ. ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ.
ಮಧ್ಯ ಜಪಾನ್ ಭಾಗದಲ್ಲಿ ಕಂಪನ ಉಂಟಾಗಿದ್ದು, ಕೆಲ ಮನೆಗಳಿಗೆ ಹಾನಿಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಬಲ ಭೂಕಂಪನದಿಂದಾಗಿ, ಸುನಾಮಿ ಏಳುವ ಸಾಧ್ಯತೆ ಹೆಚ್ಚಿದೆ. ಜನರು ಎತ್ತರದ ಪ್ರದೇಶಗಳಿಗೆ ತಕ್ಷಣವೇ ತೆರಳಬೇಕು ಎಂದು ಜಪಾನ್‌ನ ಹವಾಮಾನ ಇಲಾಖೆಯಾದ ಮೆಟರಾಲಾಜಿಕಲ್ ಏಜೆನ್ಸಿ ಹೇಳಿದೆ.
16 ಅಡಿ ಎತ್ತರದ ಅಲೆಗಳ ಎಚ್ಚರಿಕೆ:ಭೂಕಂಪನದಿಂದಾಗಿ ಇಶಿಕಾವಾ ಪ್ರದೇಶಕ್ಕೆ ಸುನಾಮಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೊನ್ಶು ದ್ವೀಪದ ಪಶ್ಚಿಮ ಕರಾವಳಿಯ ಭಾಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸುನಾಮಿ ಅನಾಹುತ ಸೃಷ್ಟಿಸಲಿದೆ. ಜಪಾನಿನ ಪಬ್ಲಿಕ್ ಬ್ರಾಡ್‌ಕಾಸ್ಟರ್ ಎನ್ಎಚ್ಕೆ 5 ಮೀಟರ್ (16.5 ಅಡಿ) ಎತ್ತರದ ಅಲೆಗಳು ಏಳಲಿವೆ. ನೀರಿನ ರಭಸ ತೀವ್ರವಾಗಿರಲಿದೆ ಎಂದು ಎಚ್ಚರಿಕೆ ರವಾನಿಸಲಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಜನರು ಎತ್ತರದ ಭೂಮಿ ಅಥವಾ ಕಟ್ಟಡದ ಮೇಲ್ಭಾಗಕ್ಕೆ ತೆರಳಲು ಸೂಚಿಸಲಾಗಿದೆ.
ಜಪಾನ್‌ನ ಪಶ್ಚಿಮ ಕರಾವಳಿಗಳಾದ ನಿಗಾಟಾ ಮತ್ತು ಇತರ ಪ್ರಾಂತ್ಯಗಳಿಗೆ ಸುಮಾರು 3 ಮೀಟರ್ ಎತ್ತರದ ಸುನಾಮಿಯ ಅಲೆಗಳು ಅಪ್ಪಳಿಸುವ ನಿರೀಕ್ಷೆಯಿದೆ. ಚಿಕ್ಕ ಸುನಾಮಿ ಅಲೆಗಳು ಕರಾವಳಿಯನ್ನು ಈಗಾಗಲೇ ತಲುಪಿವೆ. ಬಳಿಕ ಅವು ಇನ್ನಷ್ಟು ತೀವ್ರತೆ ಪಡೆಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾನಿಯ ಬಗ್ಗೆ ಮಾಹಿತಿ ಇಲ್ಲ:ನಿಗಾಟಾ ಪ್ರದೇಶವು ಪರಮಾಣು ಸ್ಥಾವರಗಳನ್ನು ಹೊಂದಿದೆ. ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿಯು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸದ್ಯಕ್ಕೆ ಭೂಕಂಪನದಿಂದ ಆದ ಹಾನಿಯ ಬಗ್ಗೆ ಯಾವುದೇ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಜಪಾನ್ ಅತ್ಯಂತ ಭೂಕಂಪ ಪೀಡಿತ ರಾಷ್ಟ್ರವಾಗಿದೆ. 2011 ರ ಮಾರ್ಚ್ನಲ್ಲಿ ಉಂಟಾದ ಪ್ರಬಲ ಭೂಕಂಪದಿಂದಾಗಿ ಭಾರೀ ಸುನಾಮಿ ಉಂಟಾಗಿತ್ತು. ನೀರು ಪರಮಾಣು ಸ್ಥಾವರದೊಳಕ್ಕೆ ನುಗ್ಗಿ ಭಾರೀ ಹಾನಿ ಉಂಟು ಮಾಡಿತ್ತು. ಸಾವಿರಾರು ಜನರ ಸಾವಿಗೂ ಕಾರಣವಾಗಿತ್ತು.
ಜಪಾನ್ ಪಿಎಂಒ ನಿರ್ದೇಶನಗಳು:ಭೂಕಂಪನದಿಂದಾಗಿ ಸುನಾಮಿ ಏಳುವ ಕಾರಣ ಜಪಾನ್‌ನ ಪ್ರಧಾನಮಂತ್ರಿ ಕಚೇರಿ ಸಾರ್ವಜನಿಕರಿಗೆ ತುರ್ತು ನಿರ್ದೇಶನಗಳನ್ನು ರವಾನಿಸಿದೆ. ಜನರು ಸಮಯೋಚಿತವಾಗಿ ಸುರಕ್ಷಿತ ಸ್ಥಳಕ್ಕೆ ತಕ್ಷಣವೇ ತೆರಳಬೇಕು. ಹಾನಿ ತಡೆಗೆ ನಿವಾಸಿಗಳನ್ನು ನಿಗದಿತ ಪ್ರದೇಶದಿಂದ ಕರೆದೊಯ್ಯಲು ಅಧಿಕಾರಿಗಳಿಗೆ ಸೂಚಿಸಿದೆ. ಸಾಧ್ಯವಾದಷ್ಟು ಬೇಗನೇ ಹಾನಿಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.
ಇದನ್ನೂ ಓದಿ:ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆದ ಇಸ್ರೋ: 'ಎಕ್ಸ್‌ಪೋಸ್ಯಾಟ್' ಉಡ್ಡಯನ ಯಶಸ್ವಿ