ಉತ್ತರ ಸುಮಾತ್ರಾ (ಇಂಡೋನೇಷ್ಯಾ) : ಇಂಡೋನೇಷ್ಯಾದಲ್ಲಿ ಸೋಮವಾರ ನಸುಕಿನ ಜಾವ ಭಾರಿ ಪ್ರಮಾಣದ ಭೂಕಂಪನವಾಗಿದೆ. ತೀವ್ರವಾಗಿ ಭೂ ಕಂಪಿಸಿದ ಕಾರಣ ಜನರು ಮನೆಯಿಂದ ಹೊರ ಬಂದಿದ್ದು ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸರ್ವೆ (ಯುಎಸ್‌ಜಿಎಸ್) ಪ್ರಕಾರ, ದೇಶದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆ ದಾಖಲಾಗಿದೆ.
37 ಕಿಲೋಮೀಟರ್ ಆಳದಲ್ಲಿ ಭೂಕಂಪನ:ಇಂಡೋನೇಷ್ಯಾದ ಸಿಂಗಿಲ್ ನಗರದ ಆಗ್ನೇಯಕ್ಕೆ 40 ಕಿಲೋಮೀಟರ್ ದೂರದಲ್ಲಿ ಭೂಕಂಪನ ಸಂಭವಿಸಿದೆ. 37 ಕಿ.ಮೀ ಆಳದಲ್ಲಿ ಕಂಪನ ದಾಖಲಾಗಿದೆ. ಇಂದು ನಸುಕಿನ ಜಾವ 3.59 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸರ್ವೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಇಂಡೋನೇಷ್ಯಾದಲ್ಲಿ 17,000 ಕ್ಕೂ ಹೆಚ್ಚು ದ್ವೀಪಗಳಿವೆ.
ಸುನಾಮಿ ಎಚ್ಚರಿಕೆ ಇಲ್ಲ: ಬಲವಾದ ಕಂಪನಗಳ ಹೊರತಾಗಿಯೂ ಇಂಡೋನೇಷ್ಯಾದ ಹವಾಮಾನ, ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ. 270 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ವಿಶಾಲವಾದ ದ್ವೀಪಸಮೂಹವೇ ಇಂಡೋನೇಷ್ಯಾ. ದೇಶವು 'ರಿಂಗ್ ಆಫ್ ಫೈರ್' ಭಾಗದಲ್ಲಿದೆ. ಇಲ್ಲಿ ಭೂಕಂಪನಗಳು, ಜ್ವಾಲಾಮುಖಿ ಸ್ಫೋಟಗಳು ಆಗಾಗ್ಗೆ ಸಂಭವಿಸುತ್ತಿರುವುದೇ ಇದಕ್ಕೆ ಕಾರಣ.
ಒಂದೇ ವಾರದ ಅಂತರದಲ್ಲಿ ಮತ್ತೆ ಕಂಪನ: ವಾರದ ಹಿಂದಷ್ಟೇ ದೇಶದಲ್ಲಿ ದೊಡ್ಡ ಪ್ರಮಾಣದ ಭೂಕಂಪನ ಸಂಭವಿಸಿತ್ತು. ತನಿಂಬಾರ್ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಭೂಮಿ ನಡುಗಿದ್ದು, ರಿಕ್ಟರ್ ಮಾಪನದಲ್ಲಿ 7.7 ತೀವ್ರತೆ ದಾಖಲಾಗಿತ್ತು. ಈಗ ಮತ್ತೊಂದು ಭೂಕಂಪನ ನಡೆದಿದ್ದು ಪ್ರಕೃತಿ ಜನರನ್ನು ಆತಂಕಕ್ಕೀಡು ಮಾಡಿದೆ.
2021ರಲ್ಲಿ ನೂರಾರು ಜನರು ಸಾವು: ನವೆಂಬರ್ 2021ರಲ್ಲಿ, ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪವು ಕನಿಷ್ಠ 331 ಜನರನ್ನು ಬಲಿ ಪಡೆದಿತ್ತು. ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸುಮಾರು 600 ಜನರು ಗಾಯಗೊಂಡಿದ್ದರು. 2018ರ ಭೂಕಂಪನ ಮತ್ತು ಸುನಾಮಿಯು ಸುಲಾವೇಸಿದಲ್ಲಿ ಸುಮಾರು 4,340 ಜನರನ್ನು ಬಲಿ ಪಡೆದ ನಂತರ ಇದು ಇಂಡೋನೇಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪವಾಗಿತ್ತು. 2004ರಲ್ಲಿ ಅತ್ಯಂತ ಶಕ್ತಿಶಾಲಿ ಹಿಂದೂ ಮಹಾಸಾಗರದ ಭೂಕಂಪದಿಂದಾಗಿ ಸುನಾಮಿ ಉಂಟಾಗಿ, ಇಂಡೋನೇಷ್ಯಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ 2,30,000 ಕ್ಕಿಂತಲೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದರು.
ಉತ್ತರ ಪ್ರದೇಶದಲ್ಲಿಯೂ ನಡುಗಿದ ಭೂಮಿ:ನಮ್ಮ ದೇಶದಲ್ಲಿಯೂ ಭೂಮಿ ಕಂಪಿಸಿದೆ. ಸೋಮವಾರ ನಸುಕಿನ ಜಾವ 1.17 ಗಂಟೆಯ ಸುಮಾರಿಗೆ ಭೂಕಂಪನದ ಅನುಭವವಾಗಿದೆ. 2.9 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸರ್ವೆ ಹೇಳಿದೆ. ಶಾಮ್ಲಿ ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಘಟನೆ ವರದಿಯಾಗಿದೆ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಇದನ್ನೂ ಓದಿ:ಇಂಡೋನೇಷ್ಯಾದಲ್ಲಿ 2 ತಿಂಗಳಲ್ಲೇ ಮತ್ತೊಂದು ಪ್ರಬಲ ಭೂಕಂಪನ: 7.7 ತೀವ್ರತೆ ದಾಖಲು