ಸುವಾ (ಫಿಜಿ): ಫಿಜಿಯಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶವಾಗಿದ್ದು, ಇದು 300ಕ್ಕೂ ಹೆಚ್ಚು ದ್ವೀಪಗಳ ಸಮೂಹ ರಾಷ್ಟ್ರವಾಗಿದೆ.
ಇಂದು ಬೆಳಗ್ಗೆ 10.01ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಫಿಜಿಯ 569 ಕಿಲೋ ಮೀಟರ್ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ6.3ರಷ್ಟು ತೀವ್ರತೆಯ ಕಂಪನ ಉಂಟಾಗಿದೆ. ಸುವಾದಿಂದ 485 ಕಿಲೋ ಮೀಟರ್ ದೂರದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ಕೇಂದ್ರ ಟ್ವೀಟ್ ಮಾಡಿದೆ. ಇದೇ ವೇಳೆ ಯಾವುದೇ ಪ್ರಾಣಹಾನಿ ಇನ್ನೂ ವರದಿಯಾಗಿಲ್ಲ. ಫಿಜಿಯಲ್ಲಿ ಒಂದು ವಾರದಲ್ಲಿ ಎರಡನೇ ಬಾರಿಗೆ ಭೂಕಂಪ ಉಂಟಾಗಿದೆ. ಇದಕ್ಕೂ ಮುನ್ನ ಕಳೆದ ಗುರುವಾರ ಫಿಜಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಇದನ್ನೂ ಓದಿ:ನ್ಯೂಜಿಲೆಂಡ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ: ಸುನಾಮಿ ಭೀತಿ ಇಲ್ಲ
ಮತ್ತೊಂದೆಡೆ, ಏಪ್ರಿಲ್ 9 ಮತ್ತು 10ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಆರು ಬಾರಿ ಭೂಮಿ ಕಂಪಿಸಿತ್ತು. ಭಾನುವಾರ ಮಧ್ಯಾಹ್ನದಿಂದ ಸೋಮವಾರ ನಸುಕಿನ ಜಾವದವರೆಗೆ ಸಂಭವಿಸಿದ ಈ ಭೂಕಂಪನದಿಂದ ನಿವಾಸಿಗಳು ಭಯಭೀತರಾಗಿದ್ದರು. ಇಲ್ಲಿನ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿತ್ತು. ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿ, 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.4.6ರಷ್ಟು ತೀವ್ರತೆಯ ಕಂಪನ ಉಂಟಾಗಿತ್ತು ಎಂದು ಭೂಕಂಪಶಾಸ್ತ್ರದ ಕೇಂದ್ರ ಹೇಳಿತ್ತು.