ಜಕಾರ್ತ(ಇಂಡೋನೇಷ್ಯಾ):ಕಳೆದ ನವೆಂಬರ್ನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪಕ್ಕೆ 300 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ, ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪನ ಉಂಟಾಗಿದೆ. ತನಿಂಬಾರ್ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಭೂಮಿ ನಡುಗಿದ್ದು, ರಿಕ್ಟರ್ ಮಾಪನದಲ್ಲಿ 7.7 ತೀವ್ರತೆ ದಾಖಲಾಗಿದೆ. ಸಾವು-ನೋವಿನ ಬಗ್ಗೆ ಸದ್ಯಕ್ಕೆ ಮಾಹಿತಿ ತಿಳಿದುಬಂದಿಲ್ಲ.
ದೇಶದ ನೈಋತ್ಯ ಭಾಗದಲ್ಲಿರುವ ಟುಯಲ್ ಪ್ರದೇಶ ಎಂದು ಕರೆಯುವ ತನಿಂಬಾರ್ನ 342 ಕಿಮೀ ವ್ಯಾಪ್ತಿಯಲ್ಲಿ ಧರೆ ನಡುಗಿದೆ. ರಿಕ್ಟರ್ ಮಾಪನದಲ್ಲಿ 7.7 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ತಿಳಿಸಿದೆ. ಭೂಕಂಪನವು ಸ್ಥಳೀಯ ಕಾಲಮಾನ 02 ಗಂಟೆ 47 ನಿಮಿಷದ ಸುಮಾರಿನಲ್ಲಿ ಅಪ್ಪಳಿಸಿದೆ. ಇದು ಆಸ್ಟ್ರೇಲಿಯಾ, ಟಿಮೋರ್ ಲೆಸ್ಟೆ ಮತ್ತು ಇಂಡೋನೇಷ್ಯಾದ ಹಲವು ಭಾಗಗಳಲ್ಲಿ ಕಂಡುಬಂದಿದೆ. ಹೆಚ್ಚೂ ಕಡಿಮೆ 14 ಮಿಲಿಯನ್ ಜನವಸತಿ ಪ್ರದೇಶದ 2000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಲುಗಾಡುವಿಕೆಯನ್ನು ಜನರು ಅನುಭವಿಸಿದ್ದಾರೆ ಎಂದು ಇಎಂಎಸ್ಸಿ ಹೇಳಿದೆ.
ಸುನಾಮಿ ಎಚ್ಚರಿಕೆ:ಭೂಕಂಪನ ಸಂಭವಿಸಿದ ಪ್ರದೇಶದಲ್ಲಿ ತೀವ್ರ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾದರೂ, ಪ್ರಾಣ ಹಾನಿ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಂದಿನ ಕೆಲವು ಗಂಟೆಗಳಲ್ಲಿ ಮತ್ತಷ್ಟು ಕಂಪನ ಉಂಟಾಗಬಹುದು, ಹಾನಿಗೊಳಗಾದ ಪ್ರದೇಶದಿಂದ ಜನರು ಸಾಧ್ಯವಾದಷ್ಟು ದೂರವಿರಿ. ಭೂಕಂಪನದ ಬಳಿಕ ಸುನಾಮಿ ಅಲೆಗಳು ಏಳುವ ಅಪಾಯವಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಅಥವಾ ಅಲ್ಲಿಂದ ತೆರವಾಗಿ ಎಂದು ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ಸೂಚನೆ ನೀಡಿದೆ.