ಮನಿಲಾ: ದಕ್ಷಿಣ ಫಿಲಿಪ್ಪಿನ್ಸ್ ದ್ವೀಪವಾದ ಮಿಂಡಾನಾವೊನಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ಅಲ್ಲದೇ ಸುನಾಮಿ ಅಲೆಗಳು ಅಪ್ಪಳಿಸುವ ಎಚ್ಚರಿಕೆ ಕೂಡ ನೀಡಲಾಗಿದೆ.
ಸುದ್ದಿ ಸಂಸ್ಥೆ ಪ್ರಕಾರ ಇಂದು ಸಂಜೆ 8:07ರ ಸುಮಾರಿಗೆ ಮಿಂಡಾನಾವೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದು 63 ಕಿ.ಮೀ ಭೂಮಿಯ ಆಳದಲ್ಲಿ ಪತ್ತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭೂಕಂಪದ ತೀವ್ರತೆ ಗಮನಿಸಿದರೆ, ದಕ್ಷಿಣ ಫಿಲಿಪ್ಪಿನ್ಸ್ ಮತ್ತು ಇಂಡೋನೇಷ್ಯಾ, ಪಲಾವ್ ಮತ್ತು ಮಲೇಷ್ಯಾದ ಕೆಲವು ಭಾಗಗಳಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
ಭೂಕಂಪನದ ಅನುಭವವಾಗುತ್ತಿದ್ದಂತೆ ಫಿಲಿಪ್ಪಿನ್ಸ್ ಸರಕಾರಿ ಏಜೆನ್ಸಿಯೊಂದು ಮಿಂಡನಾವೊದ ಪೂರ್ವ ಕರಾವಳಿಯಲ್ಲಿರುವ ಸೂರಿಗಾವೊ ಡೆಲ್ಸುರ್ ಮತ್ತು ದಾವೊ ಓರಿಯಂಟಲ್ ಪ್ರಾಂತ್ಯಗಳ ನಿವಾಸಿಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ.
ಕಳೆದ ತಿಂಗಳೂ ಸಂಭವಿಸಿದ್ದ ಭೂಕಂಪ:ಫಿಲಿಪ್ಪಿನ್ಸ್ ಮತ್ತು ಮ್ಯಾನ್ಮಾರ್ನಲ್ಲಿ ಕಳೆದ ತಿಂಗಳು 6.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ತೀವ್ರತೆಗೆ ದಕ್ಷಿಣ ಫಿಲಿಪ್ಪಿನ್ಸ್ನ ಕೆಲ ಶಾಪಿಂಗ್ ಮಾಲ್‌ಗಳು ಧರೆಗುರುಳಿದ್ದವು. ಈ ವೇಳೆ, ಅನೇಕ ಜನರು ಗಾಯಗೊಂಡಿದ್ದರೆ, 6 ಜನ ಸಾವನ್ನಪ್ಪಿದ್ದರು. ಮ್ಯಾನ್ಮಾರ್‌ನಲ್ಲೂ 5.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಕಂಪನಗಳ ಪರಿಣಾಮ ಚೀನಾ ಮತ್ತು ಥಾಯ್ಲೆಂಡ್ನಲ್ಲೂ ಕಂಡು ಬಂದಿತ್ತು.
ನೇಪಾಳದಲ್ಲಿ 157 ಜನರ ಸಾವು:ಕಳೆದ ನವೆಂಬರ್ ತಿಂಗಳ ಆರಂಭದಲ್ಲಿನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಲ್ಲಿ 157ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ಎಂದು ತಿಳಿದು ಬಂದಿತ್ತು. ಭಾರತ - ನೇಪಾಳ ಗಡಿಯಲ್ಲಿರುವ ಕತಿಹಾರ್, ಮೋತಿಹಾರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿತ್ತು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಕಳೆದ ಅಕ್ಟೋಬರ್ 22ರಂದು 6.1 ತೀವ್ರತೆಯಲ್ಲಿ ಪ್ರಬಲ ಭೂಕಂಪದ ಅನುಭವವಾಗಿತ್ತು. ಆ ದಿನ ಕಂಪನದಿಂದ ಯಾವುದೇ ಸಾವು - ನೋವು, ಪ್ರಾಣಹಾನಿ ಸಂಭವಿಸಿರಲಿಲ್ಲ. ಧಾಡಿಂಗ್ ಮಾತ್ರವಲ್ಲದೇ, ಬಾಗೃತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿತ್ತು. 2015 ರಲ್ಲಿ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸುಮಾರು 9 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಮನೆಗಳು ಹಾನಿಗೊಳಗಾಗಿದ್ದವು.
ಇದನ್ನೂ ಓದಿ:ಭಾರತದ ನೆರೆಹೊರೆಯಲ್ಲಿ ಅಲುಗಾಡಿದ ಭೂಮಿ: 3 ದೇಶಗಳ ಜನರ ನಿದ್ದೆಗೆಡಿಸಿದ ಕಂಪನ