ವೆಲ್ಲಿಂಗ್ಟನ್ (ನ್ಯೂಜಿಲೆಂಡ್):ಇತ್ತೀಚೆಗೆ ಜಗತ್ತಿನ ವಿವಿಧೆಡೆ ಭೂಕಂಪನದ ಬಗ್ಗೆ ವರದಿಯಾಗುತ್ತಿದೆ. ಟರ್ಕಿಯಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ನ್ಯೂಜಿಲೆಂಡ್‌ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ವರದಿಯಾಗಿದೆ.
ನ್ಯೂಜಿಲೆಂಡ್ನಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.2 ಎಂದು ಅಳೆಯಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 6.11ಕ್ಕೆ ಭೂಕಂಪನದ ಅನುಭವವಾಗಿದೆ ಎಂದು ಹೇಳಿದೆ.
USGS ಪ್ರಕಾರ, ಈ ಭೂಕಂಪದ ಸುಮಾರು 20 ನಿಮಿಷಗಳ ನಂತರ, ಅಂದರೆ 6:53ಕ್ಕೆ, ಕೆರ್ಮಾಡೆಕ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಳೆಯಲಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಇಲ್ಲ.
ಸುನಾಮಿ ಭಯವಿಲ್ಲ: ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ. ತುರ್ತು ಸಂದರ್ಭಗಳಿದ್ದರೆ ದೇಶದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆ ಟ್ವೀಟ್ ಮಾಡಿದೆ.
ಕಾರಣವೇನು?: ನ್ಯೂಜಿಲೆಂಡ್ನಲ್ಲಿ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಇದು ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್ ಎಂಬ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್ಗಳ ನಡುವೆ ಭೂಭಾಗ ಹಂಚಿಕೊಂಡಿದೆ. ಅಲ್ಲದೇ ರಿಂಗ್ ಆಫ್ ಫೈರ್ ಎಂದೂ ಕರೆಯಲ್ಪಡುವ ತೀವ್ರವಾದ ಭೂಕಂಪನ ವಲಯವನ್ನು ಒಳಗೊಂಡಿದೆ. ಹೀಗಾಗಿ ಪ್ರತಿವರ್ಷ ಸಾವಿರಾರು ಭೂಕಂಪನಗಳು ಸಂಭವಿಸುತ್ತವೆ ಎಂದು ನ್ಯೂಜಿಲೆಂಡ್ ಭೂಕಂಪನ ಮಾನಿಟರಿಂಗ್ ಇಲಾಖೆ ತಿಳಿಸಿದೆ. ಹೆಚ್ಚಿನ ಭೂಕಂಪಗಳು ಸಾಮಾನ್ಯ ಭೂಕಂಪಗಳಾಗಿದ್ದು, ಇನ್ನು ಕೆಲವು ಕಂಪನಗಳು ಕಟ್ಟಡ, ಜೀವ ಹಾನಿ ಉಂಟು ಮಾಡುತ್ತದೆ ಎಂದು ಸಹ ತಿಳಿಸಿದೆ.
ಕಳೆದ ತಿಂಗಳು ಅಂದ್ರೆ ಮಾರ್ಚ್ 16ರಂದು ಕೆರ್ಮಾಡೆಕ್ ದ್ವೀಪಗಳಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿತ್ತು. ಮಾರ್ಚ್ 16ರ ಬೆಳಗ್ಗೆ 6.40ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (ಯುಎಸ್ಜಿಎಸ್) ಹೇಳಿತ್ತು. ನ್ಯೂಜಿಲೆಂಡ್‌ನ ಜನವಸತಿ ಪ್ರದೇಶವಲ್ಲದ ಕೆಲವು ಕಡೆಗಳಲ್ಲಿ ಘಟನೆ ನಡೆದಿರುವುದಾಗಿ ತಿಳಿಸಿದೆ. ಎರಡನೇ ಭೂಕಂಪನವು 6.55ಕ್ಕೆ ನಡೆದಿರುವುದಾಗಿ ಯುಎಸ್ಜಿಎಸ್ ಮಾಹಿತಿ ನೀಡಿತ್ತು. ಇಂದು ಸಹ 20 ನಿಮಿಷಗಳ ಅಂತರಲ್ಲಿ ಎರಡು ಭೂಕಂಪನಗಳು ಸಂಭವಿಸಿರುವುದು ಗಮನಾರ್ಹ.
ಓದಿ:ನಡುಕ ನಿಲ್ಲಿಸದ ಟರ್ಕಿ: ಮತ್ತೆ 5.6 ತೀವ್ರತೆಯ ಕಂಪನ; ಧರೆಗುರುಳಿದ ಕಟ್ಟಡಗಳು
ಟರ್ಕಿ - ಸಿರಿಯಾ ಭೂಕಂಪದಲ್ಲಿ ಸಾವಿನ ಸಂಖ್ಯೆ 41000ಕ್ಕೆ ಏರಿಕೆ:ಫೆಬ್ರವರಿ 6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಆದ 7.8 ರ ತೀವ್ರತೆಯ ಭೂಕಂಪದಲ್ಲಿ ಸಾವಿರಾರೂ ಜನರು ಸಾವನ್ನಪ್ಪಿದ್ದರು. ಭೂಕಂಪದ ಒಂಬತ್ತು ದಿನಗಳ ನಂತರ ತಾಯಿ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಲಾಗಿತ್ತು. ವಿಶ್ವ ಸಂಸ್ಥೆ ಭೂಕಂಪನ ತೀವ್ರತೆಯನ್ನು ಕಂಡು 50,000 ಸಾವುಗಳು ಸಂಭವಿಸಬಹುದು ಎಂದು ಸೂಚಿಸಿತ್ತು.