ರಬತ್ (ಮೊರಾಕ್ಕೊ) : ಶುಕ್ರವಾರ ತಡರಾತ್ರಿ ಮೊರಾಕ್ಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಬೃಹತ್ ಕಟ್ಟಡಗಳು ಸೇರಿದಂತೆ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಹಾನಿಯಾಗಿದೆ. ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಇಂದು ಸಂಭವಿಸಿದ ಕಂಪನದಲ್ಲಿ ಕನಿಷ್ಠ 1,037 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1,200 ಮಂದಿ ಗಾಯಗೊಂಡಿದ್ದಾರೆ ಎಂದು ಮೊರೊಕನ್ ರಾಜ್ಯ ಮಾಧ್ಯಮವನ್ನು ಉಲ್ಲೇಖಿಸಿ, ಅಲ್ ಜಜೀರಾ ವರದಿ ಮಾಡಿದೆ. ಏತನ್ಮಧ್ಯೆ, ಅವಶೇಷಗಳ ಅಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇದಕ್ಕಾಗಿ ರಸ್ತೆಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಮೊರಾಕ್ಕೊದ ಮರಕೇಶ್ನ ನೈಋತ್ಯ ಭಾಗದಲ್ಲಿ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಮರಕೇಶ್ನ ನೈಋತ್ಯಕ್ಕೆ 44 ಮೈಲಿ (71 ಕಿಲೋಮೀಟರ್) ದೂರದಲ್ಲಿ ರಾತ್ರಿ 11:11 ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಭೂಮಿ ಕಂಪಿಸಿದ ಹಿನ್ನೆಲೆ ಭಯಭೀತರಾದ ಜನರು ಬೀದಿಗಳಲ್ಲಿ ಬಂದು ನಿಂತಿದ್ದಾರೆ. ಐತಿಹಾಸಿಕ ನಗರವಾದ ಮರ್ಕೆಚ್‌ನಿಂದ ಅಟ್ಲಾಸ್ ಪರ್ವತಗಳ ಹಳ್ಳಿಗಳವರೆಗಿನ ಕಟ್ಟಡಗಳು ಹಾನಿಗೊಳಗಾಗಿವೆ. ಸಾವಿರಾರು ಮಂದಿ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರಗಳು ಮತ್ತು ಪಟ್ಟಣದ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ :ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ : ಯಾವುದೇ ಸಾವು - ನೋವುಗಳು ವರದಿಯಾಗಿಲ್ಲ
ಅಲ್ ಹೌಝ್ ಪ್ರದೇಶದ ಪಟ್ಟಣಗಳಲ್ಲಿ ಹಲವಾರು ಮನೆಗಳು ಸಂಪೂರ್ಣ ಕುಸಿದಿವೆ. ಕೆಲ ಸ್ಥಳಗಳಲ್ಲಿ ವಿದ್ಯುತ್ ಮತ್ತು ರಸ್ತೆಗಳು ಕಡಿತಗೊಂಡಿವೆ. ಸಂತ್ರಸ್ತ ಪೀಡಿತರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಆದ್ರೆ, ಕೆಲವೆಡೆ ರಸ್ತೆಗಳು ಬಂದ್ ಆಗಿದ್ದು, ಅಧಿಕಾರಿಗಳು ತೆರವು ಕೆಲಸ ಮಾಡುತ್ತಿದ್ದಾರೆ ಎಂದು ತಲತ್ ಎನ್ ಯಾಕೌಬ್ ಪಟ್ಟಣದ ನಿವಾಸಿ ಅಬ್ದರ್ರಹೀಮ್ ಐತ್ ದೌದ್ ಮೊರೊಕನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ಮೂರು ಜಿಲ್ಲೆಯಲ್ಲಿ 3.4 ತೀವ್ರತೆ ಭೂಕಂಪ : ಯಾವುದೇ ಪ್ರಾಣ ಹಾನಿ ಇಲ್ಲ
ಮರಕೇಶ್ನ ನೈಋತ್ಯ ಭಾಗವು ಹೆಚ್ಚು ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದ್ದು, ಅಗ್ಗಾಗೆ ಇಲ್ಲಿ ಭೂಮಿ ಕಂಪಿಸುತ್ತಿರುತ್ತದೆ. ಮೊರಾಕ್ಕೊದ ಉತ್ತರ ಪ್ರದೇಶದಲ್ಲಿ ಸಹ ಭೂಕಂಪನ ಸಂಭವಿಸುತ್ತಿರುತ್ತದೆ. 1980 ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ ಸಂಭವಿಸಿದ 7.3 ತೀವ್ರತೆಯ ಎಲ್ ಅಸ್ನಾಮ್ ಭೂಕಂಪವು ಇತಿಹಾಸದಲ್ಲಿ ಅತಿದೊಡ್ಡ ಮತ್ತು ಅತ್ಯಂತ ವಿನಾಶಕಾರಿ ಭೂಕಂಪಗಳಲ್ಲಿ ಒಂದಾಗಿದೆ. ಇದು 2,500 ಜನರನ್ನು ಬಲಿ ಪಡೆದಿತ್ತು ಮತ್ತು ಕನಿಷ್ಠ 3 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. 1960 ರಲ್ಲಿ ಮೊರೊಕನ್ ನಗರದ ಅಗಾದಿರ್ ಬಳಿ 5.8 ತೀವ್ರತೆಯ ಕಂಪನವು ಸಂಭವಿಸಿತ್ತು, ಈ ವೇಳೆ ಸಾವಿರಾರು ಮಂದಿ ಸಾವನ್ನಪ್ಪಿದ್ದರು. 2004 ರಲ್ಲಿ ಈಶಾನ್ಯ ಮೊರಾಕ್ಕೊದ ಅಲ್ ಹೊಸೈಮಾದಲ್ಲಿ ಸಂಭವಿಸಿದ ಭೂಕಂಪನದಲ್ಲಿ 628 ಮಂದಿ ಮೃತಪಟ್ಟಿದ್ದರು. 926 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ :Earth quake : ಉತ್ತರ ಚಿಲಿಯಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ