ಅರ್ಜೆಂಟೀನಾ/ತಜಿಕಿಸ್ತಾನ್:ಭೂಮಿಯ ಒಳಪದರಗಳಲ್ಲಿ ತೀವ್ರ ತಿಕ್ಕಾಟ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಸತತವಾಗಿ ಭೂಕಂಪನ ಉಂಟಾಗುತ್ತಲೇ ಇದೆ. ಬುಧವಾರ ರಾತ್ರಿ ದಕ್ಷಿಣ ಅಮೆರಿಕ ಖಂಡದ ದೇಶವಾದ ಅರ್ಜೆಂಟೀನಾದ ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್ ಮತ್ತು ಮಧ್ಯ ಏಷ್ಯಾದ ತಜಕಿಸ್ತಾನದಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಅರ್ಜೆಂಟೀನಾದಲ್ಲಿ ಸಂಭವಿಸಿದ ಕಂಪನವು ಬುಧವಾರ ರಾತ್ರಿ 8.30 ರ ಸುಮಾರಿನಲ್ಲಿ ಸಂಭವಿಸಿದೆ. ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್‌ನಿಂದ 84 ಕಿಮೀ ದೂರದ ಉತ್ತರ ಪ್ರದೇಶದಲ್ಲಿ ಇದು ಘಟಿಸಿದೆ. 210 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ. ಈವರೆಗೂ ಯಾವುದೇ ಸಾವು-ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ತಜಕಿಸ್ತಾನದಲ್ಲಿ ಕಂಪನ:ಇನ್ನೊಂದೆಡೆ, ತಜಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ದಾಖಲಾದಂತೆ 5.9 ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ನೊವೊಬೋಡ್‌ನಿಂದ 51 ಕಿಮೀ ದೂರದ ವಾಯುವ್ಯ ಭಾಗದಲ್ಲಿ ಕಂಪನ ಉಂಟಾಗಿದೆ. ಭೂಕಂಪವು 01:37 ರ ಸುಮಾರಿನಲ್ಲಿ ಸಂಭವಿಸಿದೆ. ನೊವೊಬೋಡ್‌ನ 5.6 ಕಿಮೀ ಆಳದಲ್ಲಿ ಅಲೆಗಳು ಎದ್ದಿವೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.
ಅಫ್ಘಾನಿಸ್ತಾನದಲ್ಲಿ ಕಂಪನ, 4 ಸಾವು:ಇನ್ನೊಂದೆಡೆ ಅಫ್ಘಾನಿಸ್ತಾನದಲ್ಲಿ ಭೂಕಂಪನ ಉಂಟಾಗಿದೆ. ಮಾರ್ಚ್ 21 ರಂದು ಕಂಪನ ಉಂಟಾಗಿತ್ತು. ಇದರಿಂದ ಜನರು ದಿಕ್ಕಾಪಾಲಾಪಾಗಿ ಓಡಿದ್ದರು. ಈಶಾನ್ಯ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿ, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.