ಕಾಬೂಲ್(ಅಫ್ಘಾನಿಸ್ತಾನ):ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ ಉಂಟಾಗಿ ನರಮೇಧ ಸೃಷ್ಟಿಸಿತ್ತು. ಇದೀಗ ಅಫ್ಘಾನಿಸ್ತಾನದಲ್ಲೂ ಭೂಮಿ ನಡುಗಿದೆ. ಇಲ್ಲಿನ ಫೈಜಾಬಾದ್‌ನಿಂದ 213 ಕಿಮೀ ದೂರದವರೆಗಿನ ಪೂರ್ವ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 06:51 ನಿಮಿಷಕ್ಕೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಫೈಜಾಬಾದ್ ಪ್ರದೇಶದ 105 ಕಿಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಕಾಣಿಸಿಕೊಂಡಿದೆ. ಇದರ ಉದ್ಧ 72.96 ಕಿಮೀ ಇದ್ದರೆ, 213 ಕಿಮೀ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ. ಈವರೆಗೂ ಯಾವುದೇ ಸಾವು ನೋವಿನ ಬಗ್ಗೆ ವರದಿ ಸಿಕ್ಕಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
15 ದಿನಗಳ ಹಿಂದೆ ಕಂಪಿಸಿದ್ದ ಭೂಮಿ:ಇದೇ ಫೈಜಾಬಾದ್ ಪ್ರದೇಶದಲ್ಲಿ 15 ದಿನಗಳ ಹಿಂದೆ ಭೂಕಂಪನ ಉಂಟಾಗಿತ್ತು. ಪೂರ್ವ ಈಶಾನ್ಯದ 267 ಕಿ.ಮೀ ದೂರದಲ್ಲಿ ಮಧ್ಯಾಹ್ನ 4.1 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿತ್ತು. 37.73 ಅಕ್ಷಾಂಶ ಮತ್ತು 73.47 ರೇಖಾಂಶದಲ್ಲಿ 245 ಕಿ.ಮೀ ಆಳದಲ್ಲಿ ಭೂಮಿಯಲ್ಲಿ ಕಂಪನದ ಅಲೆಗಳು ಎದ್ದಿದ್ದವು. ಇದೀಗ ಮತ್ತೆ ಫೈಜಾಬಾದ್ ಪ್ರದೇಶದ ಪೂರ್ವ ಪ್ರದೇಶದಲ್ಲಿ ಪ್ರಕೃತಿ ವಿಸ್ಮಯ ನಡೆದಿದೆ.
ತಜಕಿಸ್ಥಾನದಲ್ಲಿ 6.8 ತೀವ್ರತೆಯ ಕಂಪನ:ಫೆಬ್ರವರಿ 23 ರಂದು ತಜಕಿಸ್ಥಾನದಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೇ ತಿಳಿಸಿತ್ತು. ಸುಮಾರು 20.5 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿದ್ದವು. ಇದರ ಕೇಂದ್ರಬಿಂದು ಅಫ್ಘಾನಿಸ್ತಾನ ಮತ್ತು ಚೀನಾ ಗಡಿಯಲ್ಲಿರುವ ಅರೆ ಸ್ವಾಯತ್ತ ಪ್ರದೇಶವಾದ ಗೊರ್ನೊ ಬದಕ್ಷನ್ ಪ್ರದೇಶದ ಸಮೀಪದಲ್ಲಿದೆ. ಈ ಪ್ರದೇಶ ವಿರಳ ಜನಸಂಖ್ಯೆ ಮತ್ತು ಎತ್ತರದ ಪಾಮಿರ್ ಪರ್ವಗಳಿಂದ ಕೂಡಿದೆ.