ಕಾಬೂಲ್ (ಅಫ್ಘಾನಿಸ್ತಾನ):ಇಲ್ಲಿನ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 267 ಕಿ.ಮೀ ದೂರದಲ್ಲಿ ಗುರುವಾರ ಮಧ್ಯಾಹ್ನ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. 37.73 ಅಕ್ಷಾಂಶ ಮತ್ತು 73.47 ರೇಖಾಂಶದಲ್ಲಿ 245 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.
ಭೂಕಂಪಕ್ಕೆ ತತ್ತರಿಸಿದ ಟರ್ಕಿ: ಪೂರ್ವ ಟರ್ಕಿಯಲ್ಲಿ ಕಳೆದ ಸೋಮವಾರ 5.2ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಆರಂಭದಲ್ಲಿ 5.5 ತೀವ್ರತೆಯ ಭೂಕಂಪವಾಗಿರುವುದಾಗಿ ಹೇಳಲಾಗಿತ್ತು. ಸಾವು–ನೋವು, ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಭೂಮಿಯ 5 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿತ್ತು. ಮೊದಲಿಗೆ, 10 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ ಎಂದು ತಿಳಿಸಲಾಗಿತ್ತು.
ಫೆಬ್ರವರಿ ತಿಂಗಳಾರಂಭದಲ್ಲಿ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಸಾವಿರಾರು ಕಟ್ಟಡಗಳು ಧರೆಗುರುಳಿ, 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕಟ್ಟಡ ನಿರ್ಮಾಣದಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಟರ್ಕಿ ಸರ್ಕಾರ ಈವರೆಗೆ 184 ಜನರನ್ನು ಬಂಧಿಸಿದೆ. ತನಿಖೆಯನ್ನು ಮತ್ತಷ್ಟು ವಿಸ್ತರಿಸುತ್ತಿರುವುದಾಗಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಟರ್ಕಿಯಲ್ಲದೇ, ತಜಕೀಸ್ತಾನ, ಇಂಡೋನೇಷ್ಯಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯಮ, ಕಡಿಮೆ ಪ್ರಮಾಣದ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಇದನ್ನೂ ಓದಿ:ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ