ಕರ್ನಾಟಕ

karnataka

ETV Bharat / international

ಜಪಾನ್​ ಬಳಿಕ ಇಂಡೋನೇಷ್ಯಾದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ - ಭೂಕಂಪಶಾಸ್ತ್ರದ ಕೇಂದ್ರ

Earthquake jolts Indonesia: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಸದ್ಯಕ್ಕೆ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಪ್ರಬಲ ಭೂಕಂಪ
ಪ್ರಬಲ ಭೂಕಂಪ

By ANI

Published : Jan 9, 2024, 10:34 AM IST

ಜಕಾರ್ತ (ಇಂಡೋನೇಷ್ಯಾ):ಕಳೆದ ವಾರವಷ್ಟೇ ಭೂಕಂಪನದಿಂದ ನಡುಗಿದ್ದ ಇಂಡೋನೇಷ್ಯಾ ಮತ್ತೆ ಪ್ರಕೃತಿ ಮುನಿಸಿಗೆ ಸಿಲುಕಿದೆ. ಇಲ್ಲಿನ ತಲೌಡ್​ ದ್ವೀಪ ಪ್ರದೇಶದಲ್ಲಿ ಮಂಗಳವಾರ ರಾತ್ರಿ 2.18 ನಿಮಿಷಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಇದರ ತೀವ್ರತೆ 6.7 ದಾಖಲಾಗಿದೆ.

ಹೊಸ ವರ್ಷದ ಮೊದಲ ದಿನವೇ ಜಪಾನ್​ನಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. ಇದಾದ ಬಳಿಕ ಅಧಿಕ ಪ್ರಮಾಣದ ಕಂಪನ ಇಂಡೋನೇಷ್ಯಾದಲ್ಲಿ ಸಂಭವಿಸಿದೆ. 80 ಕಿ.ಮೀ ಆಳದಲ್ಲಿ ಕಂಪನ ಅಲೆಗಳು ಎದ್ದಿವೆ. ಸದ್ಯಕ್ಕೆ ಹಾನಿ ಉಂಟಾದ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ ಎಂದು ಅಲ್ಲಿನ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ತಿಳಿಸಿದೆ. ಕಳೆದ ವಾರ ಬಾಲಾಯ್ ಪುಂಗಟ್‌ನ 98 ಕಿ.ಮೀ. ಪ್ರದೇಶದಲ್ಲಿ ತೀವ್ರ ಭೂಕಂಪ ಸಂಭವಿಸಿತ್ತು. ಭೂಕಂಪದ ಆಳವು 221.7 ಕಿ. ಮೀ.ನಲ್ಲಿ ದಾಖಲಾಗಿತ್ತು.

ಹೊಸವರ್ಷದಂದೇ ನಡುಗಿದ್ದ ಜಪಾನ್​:ಹೊಸ ವರ್ಷದ ಮೊದಲ ದಿನವೇ ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಸಂಭವಿಸಿದ ಭೂಕಂಪ ಮತ್ತು ಸಣ್ಣ ಪ್ರಮಾಣದ ಸುನಾಮಿಯು ಭಾರಿ ಅನಾಹುತ ಸೃಷ್ಟಿಸಿತ್ತು. ಈವರೆಗೂ 161 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೂರಾರು ಮನೆಗಳು ಧರಾಶಾಹಿಯಾಗಿವೆ. ರಸ್ತೆಗಳು ಬಿರುಕು ಬಿಟ್ಟು ಹಾನಿಗೀಡಾದ ಪ್ರದೇಶಗಳನ್ನು ಸಂಪರ್ಕಿಸಲು ಪರದಾಡುವಂತಾಗಿದೆ. ಇದು ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ವಾಜಿಮಾ ನಗರವೊಂದರಲ್ಲಿ 69 ಸಾವುಗಳು ಸಂಭವಿಸಿವೆ. ಸುಜು ಎಂಬಲ್ಲಿ 38 ಜನರು ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 200ಕ್ಕೂ ಅಧಿಕ ಜನರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಸತತ ಮಳೆ, ಹಿಮಪಾತ ಅಡ್ಡಿ:ಇದರ ಜೊತೆಗೆ ದೇಶದಲ್ಲಿ ಹಿಮಪಾತವಾಗುತ್ತಿದ್ದು, ಭೂಕಂಪನದಿಂದ ಹಾನಿಗೀಡಾದ ಪ್ರದೇಶಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಮಳೆ ಮತ್ತು ಹಿಮ ಅಡ್ಡಿಯಾಗುತ್ತಿದೆ. ರಸ್ತೆಗಳು ಬಿರುಕು ಬಿಟ್ಟಿವೆ. ಕೆಲ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ನೀರು, ಆಹಾರ, ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಕಡಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಕ್ರಮೇಣವಾಗಿ ಪುನಃಸ್ಥಾಪಿಸಲಾಗಿದೆ. ನೀರಿನ ಸರಬರಾಜು ಇನ್ನೂ ಪೂರ್ಣಗೊಂಡಿಲ್ಲ.

ಹಾನಿಗೀಡಾದ ಪ್ರದೇಶದಲ್ಲಿ ನಡೆಸಲಾದ ವೈಮಾನಿಕ ಸಮೀಕ್ಷೆಯಲ್ಲಿ 100ಕ್ಕೂ ಹೆಚ್ಚು ಭೂಕುಸಿತಗಳನ್ನು ಪತ್ತೆ ಹಚ್ಚಲಾಗಿದೆ. ನಗರಗಳನ್ನು ಸಂಪರ್ಕಿಸುವ ಕೆಲವು ಪ್ರಮುಖ ರಸ್ತೆಗಳು ಕಡಿತವಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:ಜಪಾನ್​ ಭೂಕಂಪದಲ್ಲಿ ಮೃತರ ಸಂಖ್ಯೆ 126ಕ್ಕೇರಿಕೆ: ಗಾಯದ ಮೇಲೆ ಮಳೆ, ಹಿಮಪಾತದ ಬರೆ

ABOUT THE AUTHOR

...view details