ಲಿಸ್ಬನ್ (ಪೋರ್ಚುಗಲ್):ಭಾರತ ಮತ್ತು ಪೋರ್ಚುಗಲ್ ರಾಷ್ಟ್ರಗಳ ದ್ವಿಪಕ್ಷೀಯ ವಿನಿಮಯವನ್ನು ವಿಸ್ತರಿಸಲು ನೇರ ವಾಯು ಸೇವೆಯ ಸಂಪರ್ಕದ ಅಗತ್ಯದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಒತ್ತಿ ಹೇಳಿದ್ದಾರೆ. ಯುರೋಪ್ ಪ್ರವಾಸ ಕೈಗೊಂಡಿರುವ ಸಚಿವರು, ಬುಧವಾರ ಪೋರ್ಚುಗಲ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಪೋರ್ಚುಗಲ್ ಮತ್ತು ಇಟಲಿಯ ನಾಲ್ಕು ದಿನಗಳ ಪ್ರವಾಸದಲ್ಲಿರುವ ಸಚಿವ ಜೈಶಂಕರ್, ಇಂದು ಪೋರ್ಚುಗಲ್‌ನ ವಿದೇಶಾಂಗ ಸಚಿವ ಜೊವೊ ಗೋಮ್ಸ್ ಕ್ರಾವಿನ್ಹೋ ಅವರೊಂದಿಗೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವಿನ ನಿಕಟ ಸಂಬಂಧಗಳಿಗೆ ಪೋರ್ಚುಗಲ್‌ನ ಕೊಡುಗೆ ಹಾಗೂ ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ ಮಾಹಿತಿಯನ್ನು ಅವರು ಹಂಚಿಕೊಂಡರು.
ಪೋರ್ಚುಗಲ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದೆ. ಈ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪೋರ್ಚುಗಲ್ ವಿದೇಶಾಂಗ ಸಚಿವ ಜೊವೊ ಗೋಮ್ಸ್ ಕ್ರಾವಿನ್ಹೋ ಅವರಿಗೆ ಧನ್ಯವಾದಗಳು. ಭಾರತ-ಇಯು ಬಾಂಧವ್ಯವನ್ನು ಹೆಚ್ಚು ಉತ್ತೇಜಿಸುವಲ್ಲಿ ಪೋರ್ಚುಗಲ್‌ನ ಕೊಡುಗೆಯನ್ನು ಎತ್ತಿ ತೋರಿಸಲಾಯಿತು. ಇದರಲ್ಲಿ ಪೋರ್ಟೊ 2021ರ ಶೃಂಗಸಭೆಯು ಒಂದು ಮೈಲಿಗಲ್ಲು ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಚಿವ ಜೈಶಂಕರ್ ಫೋಸ್ಟ್ ಮಾಡಿದ್ದಾರೆ.
ಮುಂದುವರೆದು, ಜಾಗತಿಕ ಕಾರ್ಯಸ್ಥಳದಲ್ಲಿ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆಯ ಪ್ರಸ್ತುತತೆಯನ್ನು ಗುರುತಿಸಲಾಗಿದೆ. ನೇರ ವಿಮಾನ ಸಂಪರ್ಕದ ಅಗತ್ಯವಾಗಿದೆ. ಹೊಸ ಅವಕಾಶಗಳನ್ನು ಒದಗಿಸುವ ಸಹಕಾರಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ ಮಾಹಿತಿಯ ಹಂಚಿಕೊಳ್ಳಲಾಗಿದೆ. ನಮ್ಮ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಆಚರಣೆಗೆ ಕೊಡುಗೆ ನೀಡುವಂತೆ ಸಮುದಾಯಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಬಲಪಡಿಸುವ ಬಗ್ಗೆ ಹಾಗೂ ಸಮಕಾಲೀನ ಸವಾಲುಗಳ ಕುರಿತು ಸಚಿವ ಜೈಶಂಕರ್ ಚರ್ಚೆ ನಡೆಸಿದ್ದರು. ವ್ಯಾಪಾರ ಮತ್ತು ಹೂಡಿಕೆಯು ಸ್ಪಷ್ಟವಾಗಿ ಪ್ರಬಲ ಪ್ರೇರಕ ಶಕ್ತಿಯಾಗಿದೆ. ಭಾರತೀಯ ಕಂಪನಿಗಳು ಪೋರ್ಚುಗಲ್‌ನಲ್ಲಿ ತಮ್ಮ ಛಾಪು ಮೂಡಿಸಿವೆ. ಉಭಯ ನಾಯಕರು ನಡೆಸಿದ ಕೆಲವು ಚರ್ಚೆಗಳು ಹಾಗೂ ಆರೋಗ್ಯ, ಔಷಧೀಯ, ನವೀಕರಿಸಬಹುದಾದ ಇಂಧನದಲ್ಲಿ ನಾವು ಇನ್ನೇನು ಮಾಡಬಹುದು ಎಂಬುವುದರ ಕುರಿತು ಜಂಟಿ ಆರ್ಥಿಕ ಸಮಿತಿಗೆ ವಹಿಸಲಾಗುವುದು. ನಾವು ರಕ್ಷಣಾ ಸಹಕಾರ, ಸ್ಟಾರ್ಟ್‌ಅಪ್‌ಗಳು ಹಾಗೂ ನಾವೀನ್ಯತೆಗಳ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ಜೈಶಂಕರ್ ತಿಳಿಸಿದ್ದರು.
ಅಲ್ಲದೇ, ನೇರ ವಿಮಾನ ಸಂಪರ್ಕದ ಬಗ್ಗೆ ನಮ್ಮ ನಡುವೆ ಕೆಲವು ಮಾತುಕತೆ ನಡೆದಿದೆ. ನಾವು ಅದರಲ್ಲಿ ಪ್ರಗತಿಯನ್ನು ಸಾಧಿಸಿದಾಗ ನಮ್ಮ ವಿನಿಮಯವು ವಿಸ್ತರಿಸುತ್ತದೆ ಎಂಬ ತುಂಬಾ ವಿಶ್ವಾಸವಿದೆ. ಉಭಯ ರಾಷ್ಟ್ರಗಳು ಪ್ರವಾಸೋದ್ಯಮದ ಪ್ರಗತಿ ಕುರಿತು ಹೆಚ್ಚಿನ ಆದ್ಯತೆ ವಹಿಸಿದ್ದು, ಇದು ನೇರ ವಾಯು ಸಂಪರ್ಕದಿಂದ ಬೆಳೆಯುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ:5 ಲಕ್ಷ ವಲಸಿಗರಿಗೆ ವೀಸಾ ನೀಡಲಿದೆ ಕೆನಡಾ; ಭಾರತೀಯರಿಗೆ ಅತ್ಯಧಿಕ ಲಾಭ!