ವಾಷಿಂಗ್ಟನ್ (ಅಮೆರಿಕ):ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನ್ಯೂಯಾರ್ಕ್‌ನಿಂದ ಬುಧವಾರ ವಾಷಿಂಗ್ಟನ್ ಡಿಸಿಗೆ ತಲುಪಿದ್ದು, ಇಂದು ಅಮೆರಿಕಾದ ಕೆಲ ಪ್ರತಿನಿಧಿಗಳೊಂದಿಗೆ ವಿವಿಧ ಚರ್ಚೆಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಶ್ವೇತಭವನದ ಅಧಿಕಾರಿಗಳು, ಅಮೆರಿಕ ಆಡಳಿತದ ಸದಸ್ಯರು, ವಾಣಿಜೋದ್ಯಮಿಗಳು ಮತ್ತು ಅಮೆರಿಕ ವಿದೇಶಾಂಗ ಸಚಿವರಾದ ಆಂಟೋನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.
ಹಾಗೆ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಅಮೆರಿಕದ ವಾಣಿಜ್ಯ ಪ್ರತಿನಿಧಿ, ರಾಯಭಾರಿ ಕ್ಯಾಥರೀನ್ ತೈ ಅವರನ್ನು ಕೂಡ ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನವನ್ನು ಉದ್ದೇಶಿಸಿ ಜೈಶಂಕರ್ ಮಾತನಾಡಿದ್ದರು. ಕೆನಡಾ ಮತ್ತು ಭಾರತ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತ ವಿರುದ್ಧದ ಕೆನಡಾ ಭಯೋತ್ಪಾದನೆ ಮತ್ತು ಉಗ್ರವಾದ ಹೇಳಿಕೆಯ ಕುರಿತು ನೀಡುವ ಪ್ರತಿಕ್ರಿಯೆಗಳಲ್ಲಿ "ರಾಜಕೀಯ ಅನುಕೂಲತೆ"ಯನ್ನು ಪರಿಗಣಿಸಬಾರದು ಎಂದು ಪ್ರತಿಪಾದಿಸಿದ್ದರು.
ಮಣಿಪುರದಲ್ಲಿ ವಲಸೆ ಬಂದವರಿಂದ ಅಭದ್ರತೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ನಂತರ ಮಂಗಳವಾರ ನ್ಯೂಯಾರ್ಕ್ನ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ನಲ್ಲಿ ನಡೆದ ಸಂವಾದದಲ್ಲಿ ಜೈಶಂಕರ್ ಮಣಿಪುರದ ಬಗ್ಗೆ ಪ್ರತಿಕ್ರಿಯಿಸಿದ್ದರು. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಹಜ ಸ್ಥಿತಿಯನ್ನು ಮರಳಿ ಸ್ಥಾಪಿಸಲು ಮಾರ್ಗಗಳನ್ನು ಕಂಡುಹಿಡಿಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ, ಜೊತೆಗೆ ಮಣಿಪುರಕ್ಕೆ ವಲಸೆ ಬಂದವರಿಂದ ಎದುರಾದ ಅಭದ್ರತೆಯ ಭಾವನೆಯು ಮಣಿಪುರದ ಸಮಸ್ಯೆಗೆ ಒಂದು ಕಾರಣವಾಗಿದೆ ಎಂಬುದು ನನ್ನ ಭಾವನೆ" ಎಂದಿದ್ದರು.