ಟಿಕಾಲಾ (ಇಂಡೋನೇಷ್ಯಾ): ಜಗತ್ತಿನಲ್ಲಿ ಹಲವು ರೀತಿಯ ಜನಾಂಗಗಳಿದ್ದು, ಅವುಗಳ ಆಚರಣೆಗಳು ಕೂಡ ಭಿನ್ನ-ವಿಭಿನ್ನವಾಗಿಯೇ ಇವೆ. ಅಂತೆಯೇ, ಇಂಡೋನೇಷ್ಯಾದ ದ್ವೀಪದಲ್ಲಿರುವ ಜನಾಂಗವೊಂದು ವಿಚಿತ್ರ ಪದ್ಧತಿ ಆಚರಿಸುತ್ತದೆ. ಇಲ್ಲಿ ಜನರು ಪೂರ್ವಜರ ಅಸ್ಥಿಪಂಜರಗಳನ್ನು ಸಮಾಧಿಯಿಂದ ಹೊರತೆಗೆದು ಅವುಗಳಿಗೆ ಬಟ್ಟೆ ಹಾಕಿಸುತ್ತಾರೆ. ಮತ್ತೆ ಕೆಲವರು ಅದೇ ಅಸ್ಥಿ ಪಂಜರಗಳೊಂದಿಗೆ ಫೋಟೋಗಳಿಗೂ ಪೋಸ್ ಕೊಡುತ್ತಾರೆ.
ಇಂತಹ ವಿಚಿತ್ರ ಆಚರಣೆ ಇಲ್ಲಿನ ಸುಲವೆಸಿ ದ್ವೀಪದ ಎರಡು ಸಣ್ಣ ಪಟ್ಟಣಗಳಲ್ಲಿ ನಡೆಯುತ್ತದೆ. ಈ ಪದ್ಧತಿ ಆಚರಣೆಗೆ ಮಾನೆನೆ ಎಂದು ಕರೆಯಲಾಗುತ್ತದೆ. ಇದರ ಭಾಗವಾಗಿ ಇಲ್ಲಿನ ಸಮಾಧಿಗಳಿಂದ ನೂರಾರು ಶವಗಳನ್ನು ಹೊರತೆಗೆಯಲಾಗುತ್ತದೆ. ಅವರ ಆತ್ಮಗಳನ್ನು ಗೌರವಿಸಲು ಮತ್ತು ಕಾಣಿಕೆ ಅರ್ಪಿಸುವ ನಿಟ್ಟಿನಲ್ಲಿ ಅಸ್ಥಿಗಳಿಗೆ ಬಟ್ಟೆಗಳನ್ನು ತೊಡಿಸಲಾಗುತ್ತದೆ.
"ಮಾನೆನೆ ಆಚರಣೆ ನಿಮಿತ್ತ ನಾವು ತಮ್ಮ ಹಿರಿಯರ ಸಮಾಧಿ ಕೋಣೆಗಳನ್ನು ತೆರೆಯುತ್ತೇವೆ. ನಂತರ ಇಡೀ ಸಮಾಧಿ ಕೋಣೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಮಾನೆನೆ ಆರಂಭವಾಗುತ್ತದೆ. ಬಳಿಕ ಪೂರ್ವಜನರ ಅಸ್ಥಿ ಪಂಜರಗಳನ್ನು ಸ್ವಚ್ಛ ಮಾಡಿ ಅವರ ಬಟ್ಟೆಗಳನ್ನು ಬದಲಾಯಿಸುತ್ತೇವೆ. ಇದಕ್ಕೂ ಮನ್ನ ಅಸ್ಥಿ ಪಂಜರಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸುತ್ತೇವೆ" ಎನ್ನುತ್ತಾರೆ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಸುಲ್ಲೆ ಟೋಸೇ.
"ನಮ್ಮ ಪ್ರೀತಿಪಾತ್ರರ ದೇಹಗಳು ಸುರಕ್ಷಿತವಾಗಿರಲೆಂದು ಅವುಗಳನ್ನು ಶವಪೆಟ್ಟಿಗೆಯಲ್ಲಿ ಇರಿಸುತ್ತೇವೆ. ಇವುಗಳನ್ನು ಪರ್ವತದ ಮೇಲೆ ಸಮಾಧಿ ಕೋಣೆ ಮಾಡಿಸಿಡಲಾಗಿರುತ್ತದೆ. ಈ ಆಚರಣೆಯು ಅಗಲಿದವರಿಗೆ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಸಲ್ಲಿಸುವ ಕೃತಜ್ಞತೆಯ ಸಂಕೇತ. ಇದರಿಂದ ಹಿರಿಯರ ಆತ್ಮಗಳು ಕೂಡ ಕುಟುಂಬಸ್ಥರ ಜೀವನ ಚೆನ್ನಾಗಿರಲಿ ಮತ್ತು ಸುರಕ್ಷಿತವಾಗಿರಲಿ, ಶಾಂತಿ ಮತ್ತು ಸಂತೋಷದಿಂದ ಇರಲಿ ಆಶೀರ್ವದಿಸುತ್ತವೆ" ಎಂದು ಗ್ರಾಮದ ಮುಖ್ಯಸ್ಥ ರಹಮಾನ್ ಬಾಡಸ್ ಹೇಳುತ್ತಾರೆ.