ವಾಷಿಂಗ್ಟನ್ ಡಿಸಿ, ಅಮೆರಿಕ:ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್‌ನಲ್ಲಿ ಸೋಮವಾರ ಆರಂಭವಾದ ಸಿವಿಲ್ ವಂಚನೆ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಂಡರು. ವಿಚಾರಣೆ ಬಳಿಕ ಮಾತನಾಡಿದ ಟ್ರಂಪ್, ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರದ ಹಾದಿಯಿಂದ ದೂರವಿಡಲು ಮಾಡಿದ ಷಡ್ಯಂತ್ರ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು.
ಟ್ರಂಪ್ ಅವರು ನ್ಯಾಯಾಲಯದ ಉಪಸ್ಥಿತಿಯಿಂದಾಗಿ ಅಯೋವಾ, ನ್ಯೂ ಹ್ಯಾಂಪ್‌ಶೈರ್, ದಕ್ಷಿಣ ಕೆರೊಲಿನಾ ಮತ್ತು ಇತರ ಸ್ಥಳಗಳಲ್ಲಿ ಪ್ರಚಾರ ಮಾಡಲು ಸಾಧ್ಯವಾಗದಿರುವ ಬಗ್ಗೆ ಅವರು ತಮ್ಮ ಹತಾಶೆ ವ್ಯಕ್ತಪಡಿಸಿದರು. ಏಕೆಂದರೆ ನಾನು ಅಯೋವಾ, ನ್ಯೂ ಹ್ಯಾಂಪ್‌ಶೈರ್, ದಕ್ಷಿಣ ಕೆರೊಲಿನಾ ಸೇರಿದಂತೆ ಇತರ ಹಲವು ಸ್ಥಳಗಳಲ್ಲಿ ಇರುವ ಬದಲು ಇಡೀ ದಿನ ನ್ಯಾಯಾಲಯದಲ್ಲಿ ಕುಳಿತಿದ್ದೇನೆ. ಹೀಗಾಗಿ ನನ್ನ ಪ್ರಚಾರಕ್ಕೆ ಅಡ್ಡಿ ಆಗಿದೆ ಎಂದು ಅವರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ಇಂದು) ಸಹ ನೀವು ವಿಚಾರಣೆಗೆ ಹಾಜರಾಗುತ್ತೀರಾ ಎಂದು ಪ್ರಶ್ನೆ ಕೇಳಿದಾಗ, ನಾವು ಸಹ ಮಾಡಬಹುದು, ಆದ್ರೆ ನಾನು ಅದನ್ನು ಮಾಡಲು ಬಯಸುವುದಿಲ್ಲ. ನಾನು ಇದನ್ನು ಮಾಡುವ ಬದಲು ಪ್ರಚಾರ ಮಾಡಲು ಇಷ್ಟಪಡುತ್ತೇನೆ ಎಂದರು. ಅಂದ್ರೆ ಪರೋಕ್ಷವಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಪ್ರಚಾರಕ್ಕೆ ಧುಮಕ್ಕುತ್ತೇನೆ ಎಂಬ ಅರ್ಥದಲ್ಲಿ ಟ್ರಂಪ್ ಉಚ್ಚರಿಸಿದರು.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಮಾತನಾಡಿದ್ದು, ಯಾರೂ ಕಾನೂನಿಗಿಂತ ಮೇಲಲ್ಲ, ನ್ಯಾಯ ಸಿಗುತ್ತದೆ. ಟ್ರಂಪ್ ಅವರು ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರು 250 ಮಿಲಿಯನ್ ಡಾಲರ್ ದಂಡವನ್ನು ತೆತ್ತಬೇಕಾಗುತ್ತದೆ. ಇದಲ್ಲದೆ, ಟ್ರಂಪ್ ಮತ್ತು ಅವರ ಪುತ್ರರಾದ ಟ್ರಂಪ್ ಜೂನಿಯರ್ ಮತ್ತು ಎರಿಕ್ ಟ್ರಂಪ್ ನ್ಯೂಯಾರ್ಕ್‌ನಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಪ್ರಕರಣವು ಅಮೆರಿಕದ ವಿವಿಧ ನ್ಯಾಯಾಲಯಗಳಲ್ಲಿ ಟ್ರಂಪ್ ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳಿಗಿಂತ ಭಿನ್ನವಾಗಿದೆ. ನ್ಯಾಯಾಲಯಕ್ಕೆ ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಕರಣವನ್ನು ತಂದ ನ್ಯಾಯಾಧೀಶರು ಮತ್ತು ನ್ಯೂಯಾರ್ಕ್ ಅಟಾರ್ನಿ ಜನರಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರಾಜಕೀಯ ಪ್ರೇರಿತ ಎಂದರು.
ಏನಿದು ಟ್ರಂಪ್ ಪ್ರಕರಣ:ನ್ಯೂಯಾರ್ಕ್ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಟ್ರಂಪ್ ತನ್ನ ಆಸ್ತಿಯನ್ನು ಅತಿಯಾಗಿ ಮೌಲ್ಯಮಾಪನ ಮಾಡುವ ಮೂಲಕ ಮತ್ತು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಮೂಲಕ ಬ್ಯಾಂಕುಗಳು, ವಿಮಾದಾರರು ಮತ್ತು ಇತರರನ್ನು ವಂಚಿಸಿದ್ದಾರೆ. ಟ್ರಂಪ್ ಸಂಸ್ಥೆಗೆ ಹೆಚ್ಚಿನ ಹಣವನ್ನು ಪಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ 1 ಶತಕೋಟಿ ಡಾಲರ್‌ಗೂ ಹೆಚ್ಚು ಗಳಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.
ಓದಿ:ಪ್ರಾಗ್ನಲ್ಲಿ ನಿತಿನ್ ಗಡ್ಕರಿ: ಹೈಡ್ರೋಜನ್ ಬಸ್ ಟೆಸ್ಟ್ ಡ್ರೈವ್ ಮಾಡಿದ ಕೇಂದ್ರ ಸಚಿವರು