ನ್ಯೂಯಾರ್ಕ್: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬದಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೀಪಾವಳಿಯ ದಿನದಂದು ಲಕ್ಷ್ಮಿ ಮತ್ತು ಗಣಪತಿ ಪೂಜಿಸಲಾಗುತ್ತದೆ. ಇದರೊಂದಿಗೆ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಪ್ರಸಾದವನ್ನು ವಿತರಿಸುತ್ತಾರೆ.
ಭಾರತವನ್ನು ಹೊರತುಪಡಿಸಿ, ಪ್ರಪಂಚದ ಇತರ ಹಲವು ದೇಶಗಳಲ್ಲಿ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಈ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಘೋಷಿಸಲಾಗುತ್ತದೆ. ಅದರಂತೆ ಮುಂದಿನ ವರ್ಷದಿಂದ ನ್ಯೂಯಾರ್ಕ್ನಲ್ಲಿ ದೀಪಾವಳಿ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ.
ನ್ಯೂಯಾರ್ಕ್ ನಗರವು 2023 ರಿಂದ ದೀಪಾವಳಿಯಂದು ಸಾರ್ವಜನಿಕ ಶಾಲಾ ರಜೆಯನ್ನು ಹೊಂದಿರುತ್ತದೆ. ಇದರಿಂದ ಮಕ್ಕಳಿಗೆ ದೀಪಾವಳಿ ಹಬ್ಬದ ಬಗ್ಗೆ ತಿಳಿವಳಿಕೆ ಮೂಡಲು ಉತ್ತೇಜಿಸುತ್ತದೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಮತ್ತು ನ್ಯೂಯಾರ್ಕ್ ಸಿಟಿ ಶಾಲೆಯ ಚಾನ್ಸೆಲರ್ ಡೇವಿಡ್ ಬ್ಯಾಂಕ್ಸ್ ಜೊತೆಗೂಡಿದ ಆಡಮ್ಸ್, ಪ್ರಚಾರದ ಸಮಯದಲ್ಲಿ ತಮ್ಮ ಸಂಭಾಷಣೆಯಲ್ಲಿ ದೀಪಾವಳಿ ಮತ್ತು ಬೆಳಕಿನ ಹಬ್ಬಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ಹೇಳಿದರು.
ನ್ಯೂಯಾರ್ಕ್ ನಗರದ ಸರ್ಕಾರಿ ಶಾಲೆಗಳಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಎಂದು ಘೋಷಿಸಿದ ಅವರು, ಇದು ಶೈಕ್ಷಣಿಕ ಕ್ಷಣವಾಗಿದೆ. ಏಕೆಂದರೆ ನಾವು ದೀಪಾವಳಿಯನ್ನು ಆಚರಿಸುವ ಮೂಲಕ ನಾವು ದೀಪಾವಳಿಯ ಬಗ್ಗೆ ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ. ಬೆಳಕಿನ ಹಬ್ಬ ಎಂದರೇನು, ನಮ್ಮೊಳಗಿನ ದೀಪಗಳನ್ನು ಹೇಗೆ ಬೆಳಗಿಸಬೇಕು ಎಂಬುದರ ಕುರಿತು ನಾವು ಅವರೊಂದಿಗೆ ಮಾತನಾಡಲಿದ್ದೇವೆ. ಈದ್ ಮತ್ತು ಹೊಸ ವರ್ಷದಂತಹ ಸಾರ್ವಜನಿಕ ರಜಾದಿನಗಳನ್ನು ನಗರವು ಗುರುತಿಸಿದೆ ಎಂದು ಅವರು ಹೇಳಿದರು.