ವಾಷಿಂಗ್ಟನ್, ಅಮೆರಿಕ: ಮುಂದಿನ ತಿಂಗಳು ಭಾರತದಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಕುರಿತು ಚರ್ಚೆಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪ್ರಮುಖ ಆದ್ಯತೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೌದು, ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಜಿ 20 ಶೃಂಗಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಉಕ್ರೇನ್ ಯುದ್ಧದ ಕುರಿತು ಚರ್ಚೆಯು ಪ್ರಪಂಚದಾದ್ಯಂತದ ನಮ್ಮ ಎಲ್ಲಾ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳೊಂದಿಗೆ ನಡೆಯುತ್ತಿದೆ. ಮಿತ್ರರಾಷ್ಟ್ರಗಳೊಂದಿಗಿನ ನಮ್ಮ ಮಾತುಕತೆಯಲ್ಲಿ ಉಕ್ರೇನ್ ಯುದ್ಧದ ವಿಷಯವನ್ನು ಪ್ರಸ್ತಾಪಿಸಲಾಗುವುದು. ಇದು ನಾವು ಯಾವಾಗಲೂ ಚರ್ಚಿಸುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಇದು G-20 ಶೃಂಗಸಭೆಯಲ್ಲಿಯೂ ಪ್ರಮುಖ ವಿಷಯಗಳಲ್ಲಿ ಒಂದಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಭರದಿಂದ ಸಾಗಿದ ಸಿದ್ಧತೆಗಳು: ಜಿ20 ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ವೇಳೆ ಕೇಂದ್ರ ಸರ್ಕಾರ ಯಾವುದೇ ರೀತಿಯ ವಿಳಂಬವಾಗದಂತೆ ನೋಡಿಕೊಳ್ಳುತ್ತಿದೆ. ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರು ಜಿ 20 ಶೃಂಗಸಭೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತು ಮಂಗಳವಾರ ಸಭೆ ನಡೆಸಿದರು. ಬಳಿಕ ಅವರು ಶೃಂಗಸಭೆಯ ಸಿದ್ಧತೆಗಳ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಜಿ-20 ಶೃಂಗಸಭೆಗೆ ಕೇವಲ ಒಂದು ತಿಂಗಳು ಮಾತ್ರ ಕಾಲಾವಕಾಶ ಉಳಿದಿದ್ದು, ಪ್ರಧಾನಿ ಮೋದಿ ಕೂಡ ಜಿ-20 ಶೃಂಗಸಭೆಯ ಮೇಲೆ ಕಣ್ಣಿಟ್ಟಿದ್ದಾರೆ.