ಕರ್ನಾಟಕ

karnataka

ETV Bharat / international

'ಐರನ್ ಡೋಮ್​' ರಕ್ಷಣಾ ಕವಚ ವಿಫಲವಾಯಿತಾ? ಇಸ್ರೇಲ್ ಹೇಳಿದ್ದೇನು? - ಬಲಿಷ್ಠ ಗುಪ್ತಚರ ಸಂಸ್ಥೆಯನ್ನು ಹೊಂದಿರುವ ದೇಶ

ಇಸ್ರೇಲ್ ತುಂಬಾ ಬಲಿಷ್ಠವಾದ ರಕ್ಷಣಾ ಕವಚ ಹೊಂದಿದ್ದರೂ ಇಷ್ಟು ದೊಡ್ಡ ದಾಳಿ ನಡೆದಿದ್ದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Israel's 'Pearl Harbor' moment
Israel's 'Pearl Harbor' moment

By ETV Bharat Karnataka Team

Published : Oct 8, 2023, 2:57 PM IST

ಗಾಝಾ : ಇಸ್ರೇಲ್​ಗೆ ಭಯೋತ್ಪಾದಕ ದಾಳಿಗಳು ಹೊಸದೇನಲ್ಲವಾದರೂ, ಶನಿವಾರ ನಡೆದ ದಾಳಿ ಮಾತ್ರ ಇಸ್ರೇಲ್ ಅನ್ನು ದಂಗುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶ್ವದ ಅತ್ಯಂತ ಪ್ರಭಾವಶಾಲಿ ಸಶಸ್ತ್ರ ಪಡೆಗಳಲ್ಲಿ ಒಂದಾದ ಮತ್ತು ಬಲಿಷ್ಠ ಗುಪ್ತಚರ ಸಂಸ್ಥೆಯನ್ನು ಹೊಂದಿರುವ ದೇಶ ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನದ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ. ಇಷ್ಟಾದರೂ ತನ್ನ ಮೇಲೆ ನಡೆಯಬಹುದಾದ ಬೃಹತ್ ದಾಳಿಯ ಬಗ್ಗೆ ಒಂದಿಷ್ಟೂ ಮುನ್ಸೂಚನೆ ಅದಕ್ಕೆ ಸಿಗದಿರುವುದು ಆಶ್ಚರ್ಯಕರ.

ಬಂದೂಕುಧಾರಿ ಭಯೋತ್ಪಾದಕರು ವಾಯು, ಸಮುದ್ರ ಮತ್ತು ಭೂಮಾರ್ಗಗಳಿಂದ ಇಸ್ರೇಲ್​ನೊಳಗೆ ಪ್ರವೇಶಿಸಿದ್ದರು. ನಾಗರಿಕರ ಮೇಲೆ ಗುಂಡು ಹಾರಿಸಿ ಅವರನ್ನು ಒತ್ತೆಯಾಳಾಗಿಸಿಕೊಂಡರು. ಜನ ತಮ್ಮ ಜೀವಕ್ಕೆ ಹೆದರಿ ಓಡಿ ಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು.

ಬೆಳಗ್ಗೆ ವಾಯುದಾಳಿ ಆರಂಭವಾದ ಕೂಡಲೇ ದೇಶದಲ್ಲೆಲ್ಲ ಎಚ್ಚರಿಕೆಯ ಸೈರನ್​ಗಳ ಸದ್ದು ಕೇಳಲಾರಂಭಿಸಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಇಸ್ರೇಲ್ ತನ್ನ 75 ವರ್ಷಗಳ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ದಾಳಿಗೆ ತುತ್ತಾಗಿ ಹೋಗಿತ್ತು. ಹೆಚ್ಚಾಗಿ ಬಡವರೇ ವಾಸಿಸುವ ಮತ್ತು ಜನನಿಬಿಡವಾಗಿರುವ ಗಾಜಾ ಪಟ್ಟಿಯನ್ನು ನಿಯಂತ್ರಿಸುವ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್​ನ ದಾಳಿಕೋರರು ರಾತ್ರಿಯ ವೇಳೆಗೆ ನೂರಾರು ಇಸ್ರೇಲಿಗರನ್ನು ಕೊಂದು ಸಾವಿರಾರು ಜನರನ್ನು ಗಾಯಗೊಳಿಸಿದ್ದರು.

ದಾಳಿಯಿಂದ ಇಸ್ರೇಲ್ ಅಧಿಕಾರಿಗಳ ಮುಂದೆ ಕೆಲ ಬೃಹದಾಕಾರದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇಸ್ರೇಲ್ ನೆಲದಲ್ಲಿ ಕಳೆದ 17 ವರ್ಷಗಳಲ್ಲಿ ಯಾವುದೇ ಇಸ್ರೇಲ್ ಯೋಧನನ್ನು ಯಾರೂ ಒತ್ತೆಯಾಳಾಗಿರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 1948 ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ನಂತರ ಇಸ್ರೇಲ್ ತನ್ನ ಪಟ್ಟಣಗಳು ಮತ್ತು ಸೇನಾನೆಲೆಗಳ ಮೇಲೆ ಇಂಥದೊಂದು ದಾಳಿಯನ್ನು ಕಂಡಿರಲಿಲ್ಲ.

2005ರಲ್ಲಿ ಗಾಝಾದಿಂದ ಹಿಂದೆ ಸರಿದ ಬಳಿಕ ಇಸ್ರೇಲ್​ ತನ್ನ ಗಡಿಗಳನ್ನು ದಾಳಿಯಿಂದ ರಕ್ಷಿಸಿಕೊಳ್ಳಲು ಸಾವಿರಾರು ಕೋಟಿ ಡಾಲರ್ ಖರ್ಚು ಮಾಡಿದೆ. ಗಾಝಾದ ಒಳಗಿನಿಂದ ಇಸ್ರೇಲ್​ ಮೇಲೆ ಹಾರಿ ಬರುವ ಕ್ಷಿಪಣಿಗಳು ಅಥವಾ ಸುರಂಗಗಳ ಮೂಲಕ ಭಯೋತ್ಪಾದಕರು ಒಳನುಸುಳುವುದನ್ನು ತಡೆಗಟ್ಟುವ ಬಲಿಷ್ಠ ರಕ್ಷಣಾ ಕವಚವನ್ನು ಇಸ್ರೇಲ್ ನಿರ್ಮಿಸಿಕೊಂಡಿದೆ. ಆದರೆ ಐರನ್ ಡೋಮ್ ಎಂದು ಕರೆಯಲ್ಪಡುವ ಅದರ ರಕ್ಷಣಾ ಕವಚ ಈ ಬಾರಿ ವಿಫಲವಾಗಿದ್ದಾದರೂ ಏಕೆ ಎಂಬುದು ಜಗತ್ತಿಗೆ ಗೊತ್ತಾಗಿಲ್ಲ.

ಸ್ವಲ್ಪ ಸಮಯ ಕಳೆದ ನಂತರ ಇಸ್ರೇಲ್ ತನ್ನ ರಕ್ಷಣಾ ಕವಚವನ್ನು ಖಂಡಿತವಾಗಿಯೂ ಪುನರ್ ಪರಿಶೀಲಿಸಲಿದೆ. ಹಮಾಸ್ ತನ್ನ ಮೇಲೆ 2200 ರಾಕೆಟ್​ಗಳನ್ನು ಹಾರಿಸಿದೆ ಎಂದು ಶನಿವಾರ ಬೆಳಗ್ಗೆ ಇಸ್ರೇಲ್ ಹೇಳಿದೆಯಾದರೂ, ಇವುಗಳಲ್ಲಿ ಎಷ್ಟು ರಾಕೆಟ್​ಗಳನ್ನು ಹೊಡೆದು ಹಾಕಲು ಸಾಧ್ಯವಾಯಿತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಗಡಿ ಸಂರಕ್ಷಣಾ ಬೇಲಿ ಸುರಕ್ಷಿತವಾಗಿದೆಯಾ ಎಂಬ ಬಗ್ಗೆಯೂ ಇಸ್ರೇಲ್ ಇನ್ನೂ ಮಾತನಾಡಿಲ್ಲ.

ಇದನ್ನೂ ಓದಿ : ಇಸ್ರೇಲ್ ಮೇಲೆ ಹಮಾಸ್ ಉಗ್ರರ ಅಟ್ಟಹಾಸ: ಮೃತರ ಸಂಖ್ಯೆ 300ಕ್ಕೆ ಏರಿಕೆ

ABOUT THE AUTHOR

...view details