ಲಂಡನ್(ಇಂಗ್ಲೆಂಡ್):ತೀವ್ರ ಆರ್ಥಿಕ ಕುಸಿತ ಅನುಭವಿಸುತ್ತಿರುವ, ಒಂದು ಕಾಲದಲ್ಲಿ 'ಸೂರ್ಯ ಮುಳುಗದ ನಾಡು' ಎಂದೇ ಕರೆಯಲ್ಪಡುತ್ತಿದ್ದ ಬ್ರಿಟನ್‌ನ 57ನೇ ಪ್ರಧಾನಿಯಾಗಿ ನಿಯೋಜಿತರಾದ ಭಾರತೀಯ ಸಂಜಾತ ರಿಷಿ ಸುನಕ್ ದೇಶಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಇಂದು ವಾಗ್ದಾನ ಮಾಡಿದರು.
ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಕನ್ಸರ್ವೇಟಿವ್ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಬೆಂಬಲಿಸಿದ ಎಲ್ಲ ಸಂಸದರನ್ನುದ್ದೇಶಿಸಿ ಮಾತನಾಡುತ್ತಾ, ಜನರನ್ನು ತಲುಪಲು ದಿನವಿಡೀ ಕೆಲಸ ಮಾಡುವೆ. ಸಮಗ್ರತೆ ಮತ್ತು ನಮ್ರತೆಯಿಂದ ದೇಶಕ್ಕಾಗಿ ಸೇವೆ ಸಲ್ಲಿಸುವೆ ಎಂದರು.
ಈಚೆಗೆ ಪ್ರಧಾನಿ ಹುದ್ದೆ ತೊರೆದ ಲಿಜ್ ಟ್ರಸ್ ಅವರನ್ನು "ಗೌರವಯುತ ರಾಜಕಾರಣಿ" ಎಂದು ಹೊಗಳುವ ಮೂಲಕ ರಿಷಿ ಸುನಕ್ ಭಾಷಣ ಆರಂಭಿಸಿದರು. ದೇಶ ಆಂತರಿಕ ಮತ್ತು ಬಾಹ್ಯವಾಗಿ ಬಿಕ್ಕಟ್ಟು ಎದುರಿಸುತ್ತಿದ್ದು, ಅದನ್ನು ಸರ್ವರೂ ಜೊತೆಗೂಡಿ ಎದುರಿಸೋಣ ಎಂದು ಹೇಳಿದರು.
ನನ್ನನ್ನು ಕನ್ಸರ್ವೇಟಿವ್ ಪಕ್ಷದ ನಾಯಕನನ್ನಾಗಿ ಒಪ್ಪಿಕೊಂಡ ನನ್ನೆಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ. ಪ್ರಧಾನಿಯಾಗಿ ನಿಯೋಜಿಸಿದ ಪ್ರೀತಿಯ ದೇಶಕ್ಕೆ ನನ್ನಿಂದಾಗುವ ಎಲ್ಲ ಕೆಲಸಗಳನ್ನು ಮಾಡುವೆ. ಋಣಿಯಾಗಿರುವ ದೇಶಕ್ಕೆ ಮರಳಿ ನೀಡಲು ಸಾಧ್ಯವಾಗುವ ಎಲ್ಲ ಪ್ರಯತ್ನ ಮಾಡುವೆ ಎಂದರು.
ಸಬಲ ದೇಶದಲ್ಲಿ ಆರ್ಥಿಕ ಹೊಡೆತ:ಇಂಗ್ಲೆಂಡ್ನ ಆರ್ಥಿಕ ಸವಾಲುಗಳ ಬಗ್ಗೆ ಮಾತನಾಡಿದ ರಿಷಿ ಸುನಕ್, ಬ್ರಿಟನ್ ಒಂದು ಶ್ರೇಷ್ಠ ದೇಶವಾಗಿದೆ. ಆದರೀಗ ಅದು ಗಹನವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ನಮಗೀಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ. ಪಕ್ಷ ಮತ್ತು ದೇಶವನ್ನು ಒಟ್ಟಿಗೆ ನಡೆಸಿಕೊಂಡು ಹೋಗುವುದು ನನ್ನ ಆದ್ಯತೆಯಾಗಿದೆ. ಇದು ನಮಗಿರುವ ಏಕೈಕ ಹಾದಿಯಾಗಿದೆ. ಉತ್ತಮ ಭವಿಷ್ಯಕ್ಕಾಗಿ ಸವಾಲುಗಳನ್ನು ಜಯಿಸಬೇಕಿದೆ ಎಂದು ಹೇಳಿದರು.