ಕರ್ನಾಟಕ

karnataka

ETV Bharat / international

ಹಮಾಸ್​ - ಇಸ್ರೇಲ್​ ಕಾಳಗ: 2100 ಕ್ಕೂ ಹೆಚ್ಚು ಸಾವು -ನೋವು.. ಗಾಜಾಪಟ್ಟಿಯಿಂದ ವಲಸೆ ಶುರು

ಗಾಜಾಪಟ್ಟಿ ಮೇಲೆ ಇಸ್ರೇಲ್​​​​​ ಸಮರ ಸಾರಿದ್ದು, ದಾಳಿ ಐದನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೂ ಎರಡೂ ಕಡೆ 2100ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಈ ನಡುವೆ ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕೆನ್​ ಇಸ್ರೇಲ್​ಗೆ ಭೇಟಿ ನೀಡುತ್ತಿದ್ದಾರೆ.

Death toll in Israel Hamas conflict increases to more than 2,100
ಹಮಾಸ್​ - ಇಸ್ರೇಲ್​ ಕಾಳಗ: 2100 ಕ್ಕೂ ಹೆಚ್ಚು ಸಾವು -ನೋವು.. ಗಾಜಾಪಟ್ಟಿಯಿಂದ ವಲಸೆ ಶುರು

By ETV Bharat Karnataka Team

Published : Oct 11, 2023, 9:52 AM IST

ಜೆರುಸಲೇಂ/ಗಾಜಾ: ಹಮಾಸ್​ ದಾಳಿ ಬಳಿಕ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ - ಹಮಾಸ್ ಸಂಘರ್ಷದಲ್ಲಿ ಸಾವಿನ ಸಂಖ್ಯೆ 2,100ಕ್ಕೆ ಏರಿಕೆ ಆಗಿದೆ . ಐದನೇ ದಿನವೂ ಹಮಾಸ್​ ಮೇಲೆ ಇಸ್ರೇಲ್​ನ ಮಿಲಿಟರಿ ಕಾರ್ಯಾಚರಣೆ ಮುಂದುವರಿದಿದ್ದು ಹೆಚ್ಚಿನ ಸಾವುನೋವುಗಳು ವರದಿಯಾಗುತ್ತಲೇ ಇವೆ.

ಇಸ್ರೇಲ್​ ಮೇಲೆ ಹಮಾಸ್ ದಾಳಿಯ ಪರಿಣಾಮವಾಗಿ ಕನಿಷ್ಠ 1,200 ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಮೃತಪಟ್ಟವರಲ್ಲಿ ವಿದೇಶಿ ಪ್ರಜೆಗಳು ಸೇರಿದ್ದಾರೆ. ಅಮೆರಿಕದ 14, ಫ್ರಾನ್ಸ್​ನ 8ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಕನಿಷ್ಠ 2,806 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್​ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಸ್ರೇಲಿ ಮೂಲಗಳ ಪ್ರಕಾರ, ಇಸ್ರೇಲಿ ಪಡೆಗಳ 50 ರಿಂದ 100 ಸದಸ್ಯರು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಹಮಾಸ್​ ಉಗ್ರರು ಸೆರೆಹಿಡಿದಿದ್ದು, ಬಲವಂತವಾಗಿ ಗಾಜಾಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪುಗಳು ಈ ಎಲ್ಲರನ್ನು ಬಲವಂತವಾಗಿ ಸೆರೆಯಲ್ಲಿಟ್ಟುಕೊಂಡಿವೆ ಎಂದು ವರದಿಯಾಗಿದೆ.

ಏತನ್ಮಧ್ಯೆ ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್​ ಯುದ್ಧ ಸಾರಿದ್ದು, ಗಾಜಾ ಪಟ್ಟಿಯ ಮೇಲಿನ ದಾಳಿಯಲ್ಲಿ 900 ಕ್ಕೂ ಹೆಚ್ಚು ಪ್ಯಾಲಿಸ್ಟೇನಿಯನ್ನರು ಮೃತಪಟ್ಟಿದ್ದಾರೆ. 15 ಅರೆವೈದ್ಯರು ಮತ್ತು 20 ಪತ್ರಕರ್ತರು ಸೇರಿದಂತೆ 4,500 ಇತರರು ಗಾಯಗೊಂಡಿದ್ದಾರೆ.

ಇಸ್ರೇಲ್​ನ ನಿರಂತರ ದಾಳಿಯಿಂದ ಗಾಜಾಪಟ್ಟಿ ರಕ್ತಸಿಕ್ತವಾಗಿದೆ. ಇಲ್ಲಿ ಪ್ರಸ್ತುತ 44 ಪ್ರತಿಶತದಷ್ಟು ಔಷಧಗಳ ಕೊರತೆ ಉಂಟಾಗಿದೆ. 32 ಪ್ರತಿಶತ ವೈದ್ಯಕೀಯ ವಸ್ತುಗಳು, ಮತ್ತು ಶೇ 60ರಷ್ಟು ಪ್ರಯೋಗಾಲಯ ಮತ್ತು ರಕ್ತನಿಧಿ ಪೂರೈಕೆಗಳ ಜೊತೆಗೆ, ವಿದ್ಯುತ್ ಜನರೇಟರ್‌ಗಳ ಕೊರತೆ ಎದುರಾಗಿದೆ ಎಂದು ಪ್ಯಾಲಿಸ್ಟೇನಿಯನ್ ಸಚಿವಾಲಯ ಹೇಳಿದೆ.

ಗಾಜಾ ಪಟ್ಟಿಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸಾಮೂಹಿಕ ವಲಸೆ ಆರಂಭವಾಗಿದೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. 263,934 ಮಂದಿ ದಾಳಿಯಿಂದ ತಪ್ಪಿಸಿಕೊಳ್ಳಲು ವಲಸೆಗೆ ಮುಂದಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಸ್ಥಳಾಂತರಗೊಂಡವರಲ್ಲಿ, 175,486 ಕ್ಕೂ ಹೆಚ್ಚು ಜನರು ವಿಶ್ವಸಂಸ್ಥೆ ರಿಲೀಫ್ ವರ್ಕ್ಸ್ ಏಜೆನ್ಸಿ - ಯುಎನ್‌ಆರ್‌ಡಬ್ಲ್ಯುಎ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇಸ್ರೇಲ್​​​ಗೆ ಅಮೆರಿಕ ವಿದೇಶಾಂಗ ಸಚಿವರ ಭೇಟಿ:ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು, ಇಂದು ಇಸ್ರೇಲ್​ಗೆ ಪ್ರಯಾಣ ಬೆಳಸಲಿದ್ದಾರೆ. ಹಮಾಸ್​ ದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಯಲು ಹಾಗೂ ಇಸ್ರೇಲ್​ ಬೆಂಬಲಿಸಲು ಅವರು ಈ ಪ್ರಯಾಣ ಕೈಗೊಂಡಿದ್ದಾರೆ.

ಈಗಾಗಲೇ ಅಮೆರಿಕ ಇಸ್ರೇಲ್​​ಗೆ ಬೆಂಬಲ ಘೋಷಿಸಿದ್ದು, ಮಿಲಿಟರಿ ನೀಡಿದೆ. ಬ್ಲಿಂಕೆನ್​​ ಅವರ ಪ್ರವಾಸದ ಬಗ್ಗೆ ಯುಎಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ವಿದೇಶಾಂಗ ಸಚಿವ ಆಂಟೋನಿ ಜೆ ಬ್ಲಿಂಕೆನ್ ಅವರು ಅಕ್ಟೋಬರ್ 11-13, 2023 ರಂದು ಇಸ್ರೇಲ್ ಮತ್ತು ಜೋರ್ಡಾನ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ:ಹಮಾಸ್‌ ಉಗ್ರರ ವಿರುದ್ಧದ ಸಮರಕ್ಕೆ 3 ಲಕ್ಷ ಇಸ್ರೇಲ್ ಸೈನಿಕರು ಸಜ್ಜು; ಗಾಜಾ ಮೇಲೆ ನಿರಂತರ ದಾಳಿ

ABOUT THE AUTHOR

...view details