ಇಸ್ಲಾಮಾಬಾದ್: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಭೀಕರ ಭೂಕಂಪದಿಂದ ತತ್ತರಿಸಿದೆ. ಶನಿವಾರ ಸಂಭವಿಸಿದ ಸರಣಿ ಭೂಕಂಪದಲ್ಲಿ ಮೃತರ ಸಂಖ್ಯೆ ಎರಡು ಸಾವಿರಕ್ಕೆ ಏರಿಕೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ಭಾನುವಾರ ಹೇಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅಘ್ಘನ್ನರು ಕಂಡ ಘೋರ ದುರಂತ ಇದಾಗಿದೆ.
ಪಶ್ಚಿಮ ಅಫ್ಘಾನ್ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ತಿಳಿಸಿದೆ. ಆದರೆ, ಮಾಹಿತಿ ಹಾಗೂ ಸಂಸ್ಕೃತಿ ಇಲಾಖೆಯ ವಕ್ತಾರ ಅಬ್ದುಲ್ ವಾಹಿದ್ ರಾಯನ್, ಹೆರಾತ್ ಪ್ರದೇಶದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಆರಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. ಅವಶೇಷಗಳಲ್ಲಿ ನೂರಾರು ಜನರು ಸಮಾಧಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ವಿಶ್ವಸಂಸ್ಥೆಯು ಶನಿವಾರ, ಪ್ರಾಥಮಿಕ ಮಾಹಿತಿ ಪ್ರಕಾರ 320 ಜನರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿತ್ತು. ನಂತರ ನಿಖರ ಅಂಕಿ-ಅಂಶವನ್ನು ಕಲೆಹಾಕುವುದಾಗಿ ಹೇಳಿತ್ತು. ಇದರ ಬಳಿಕ ಸ್ಥಳೀಯ ಅಧಿಕಾರಿಗಳು ಸುಮಾರು 100 ಜನರು ಮೃತಪಟ್ಟಿದ್ದು, 500 ಜನರು ಗಾಯಗೊಂಡಿದ್ದಾರೆ ಎಂಬುವುದಾಗಿ ಮಾಹಿತಿ ನೀಡಿದ್ದಾರೆ. 465 ಮನೆಗಳು ನೆಲಸಮವಾಗಿದೆ. 135 ಮನೆಗಳು ಹಾನಿಗೆ ಒಳಗಾಗಿವೆ ಎಂದು ಎಂದು ವಿಶ್ವಸಂಸ್ಥೆಯ ಮಾನವ ವ್ಯವಹಾರಗಳು ಸಮನ್ವಯ ಕಚೇರಿ ಮಾಹಿತಿ ನೀಡಿತ್ತು.
ಭೂಕಂಪದಲ್ಲಿ ಮೃತರು ಮತ್ತು ಗಾಯಾಳುಗಳ ಸಂಖ್ಯೆ ನಿರಂತರವಾಗಿ ವರದಿಯಾಗುತ್ತಿದೆ. ಗಾಯಾಳುಗಳಿಗೆ ಅಗತ್ಯವಾದ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಲ್ಲಿ ಅನೇಕ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ನೆರವಿನೊಂದಿಗೆ ಗಾಯಾಳು ಮಹಿಳೆಯರು ಹಾಗೂ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಎಜೆನ್ಸಿ ಸಾಮಾಜಿಕ ಜಾಲತಾಣ ಏಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲು 12 ಆ್ಯಂಬುಲೆನ್ಸ್ಗಳನ್ನು ಜೆಡ್ಡಾದಿಂದ ಕಳುಹಿಸಲಾಗಿದೆ ಎಂದು ಹೇಳಿದೆ.
ಹೆರಾತ್ ನಗರದ ವಾಯುವ್ಯದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇದೆ. ಇಲ್ಲಿ ರಿಕ್ಟರ್ ಮಾಪನದಲ್ಲಿ 6.3, 5.9 ಮತ್ತು 5.5 ರ ತೀವ್ರತೆಯ ಮೂರು ಪ್ರಬಲವಾದ ಕಂಪನಗಳು ದಾಖಲಾಗಿದೆ ಎಂದು ಎಂದು ಅಮೆರಿಕದ ಭೂವಿಜ್ಞಾನ ಸಮೀಕ್ಷೆ ಹೇಳಿತ್ತು. ಶನಿವಾರ ಮಧ್ಯಾಹ್ನದ ಹೊತ್ತು ಕನಿಷ್ಠ ಐದು ಬಾರಿ ಬಲವಾದ ಕಂಪನದ ಅನುಭವವಾಗಿದೆ. ಇದರಿಂದ ಮನೆಗಳು, ಅಂಗಡಿಗಳಲ್ಲಿದ್ದ ಎಲ್ಲ ಜನರು ಭಯದಿಂದ ಹೊರ ಓಡಿಬಂದರು. ಈ ಸಂದರ್ಭದಲ್ಲಿ ನಾವು ಮನೆಯಿಂದ ಕೂಗುತ್ತಾ ಹೊರೆಗೆ ಬಂದೆವು ಎಂದು ಹೆರಾತ್ ನಗರದ ನಿವಾಸಿಯೊಬ್ಬರು ತಿಳಿಸಿದ್ದಾರೆ.
2022ರ ಜೂನ್ನಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಪಂಕ ಸಂಭವಿಸಿತ್ತು. ಪರ್ವತ ಪ್ರದೇಶದಲ್ಲಿ ಉಂಟಾಗಿದ್ದ ಈ ಕಂಪನದಿಂದ ಕಲ್ಲು-ಮಣ್ಣಿನಿಂದ ಮನೆಗಳು ಕೂಡ ಸಂಪೂರ್ಣವಾಗಿ ನಾಶವಾಗಿತ್ತು. ಆಗ ಅಂದಾಜು ಒಂದು ಸಾವಿರ ಜನರು ಮೃತಪಟ್ಟಿದ್ದರು ಹಾಗೂ 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಪಶ್ಚಿಮ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಎರಡು ಭೂಕಂಪಗಳು; 320 ಜನರ ಸಾವು?