ನಾಸಿರಿಯಾಹ್(ಇರಾಕ್):ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ 'ಕಾಂಗೋ' ಎಂಬ ಮಾರಣಾಂತಿಕ ಕಾಯಿಲೆ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈಗಾಗಲೇ 19 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಜ್ವರ ಮತ್ತು ಮೂಗಿನಿಂದ ತೀವ್ರ ರಕ್ತಸ್ರಾವಕ್ಕೆ ಸಂಬಂಧಿಸಿದ ಈ ವೈರಸ್‌ನಿಂದ ಹೆಚ್ಚಿನ ಮರಣ ಪ್ರಮಾಣ ದಾಖಲಾಗಿರುವುದು ಆತಂಕಕಾರಿ ವಿದ್ಯಮಾನ. ಇದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಇರಾಕ್‌ನ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್‌ಗಳನ್ನು ಧರಿಸಿ ಕೀಟನಾಶಕ ಔಷಧಿ ಸಿಂಪಡಿಸುತ್ತಿದ್ದಾರೆ.
ನ್ಯೂರೋವೈರಸ್ ಎಂದೂ ಕರೆಯಲ್ಪಡುವ ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ (CCHF) ಉಣ್ಣೆ ಕಡಿತದಿಂದ ಪ್ರಾಣಿಗಳಿಗೆ ಹರಡುತ್ತದೆ. ಈ ಉಣ್ಣೆಗಳು ಹಸು, ಎಮ್ಮೆ, ಮೇಕೆ ಮತ್ತು ಕುರಿಗಳಲ್ಲಿ ವೈರಸ್ ಹರಡುತ್ತವೆ. ಸೋಂಕಿತ ಜಾನುವಾರುಗಳ ರಕ್ತವನ್ನು ಸ್ಪರ್ಶಿಸುವ ಮೂಲಕ ಅಥವಾ ಕಸಾಯಿಖಾನೆಗಳಿಂದ ಮಾಂಸ ಕತ್ತರಿಸುವ ಮೂಲಕವೂ ವೈರಸ್ ಮನುಷ್ಯರಿಗೆ ಹರಡುತ್ತದೆ.
ಸೋಂಕಿತ ಜನರ ರಕ್ತ, ಮಲ ಮತ್ತು ಬೆವರಿನಿಂದ ವೈರಸ್ ಇತರರಿಗೆ ಹರಡಬಲ್ಲದು. ವೈರಸ್ ಸೋಂಕಿಗೆ ಒಳಗಾದ ಜನರು ಉಸಿರಾಟದ ತೊಂದರೆ, ತಲೆನೋವು, ವಾಂತಿ, ಅತಿಸಾರ, ಅಧಿಕ ಜ್ವರ ಮತ್ತು ತೀವ್ರ ಮೂಗಿನ ರಕ್ತಸ್ರಾವದಿಂದಲೂ ಬಳಲುತ್ತಾರೆ. ಇದು ಅಂತಿಮವಾಗಿ ಸಾವಿಗೆ ಕಾರಣವಾಗಬಹುದು.
ಮಾರಣಾಂತಿಕ ಕಾಯಿಲೆಯಿಂದ ಇರಾಕ್‌ನಲ್ಲಿ ಇದುವರೆಗೆ 19 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಆಫ್ರಿಕಾ, ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚು ಸಾಮಾನ್ಯವಾಗಿರುವ ಈ ರೋಗವು ಮರಣ ಪ್ರಮಾಣವನ್ನು 10 ರಿಂದ 40 ಪ್ರತಿಶತದಷ್ಟು ಹೊಂದಿದೆ ಎಂದು ಡಬ್ಲ್ಯುಎಚ್‌ಒ ಹೇಳುತ್ತದೆ.
ಇದನ್ನೂ ಓದಿ:ಸೌದಿ ಅರೇಬಿಯಾದಲ್ಲಿ ಕೋವಿಡ್ ಹೆಚ್ಚಳ: ಭಾರತ ಸೇರಿ 16 ದೇಶಗಳಿಗೆ ಪ್ರಯಾಣ ನಿಷೇಧ
43 ವರ್ಷಗಳಲ್ಲಿ ಮೊದಲ ಬಾರಿಗೆ ಈ ಮಟ್ಟದಲ್ಲಿ ಏರಿಕೆ: ಕಾಂಗೋ ವೈರಸ್ ವಿರುದ್ಧ ಹೋರಾಡಲು ಯಾವುದೇ ಲಸಿಕೆಗಳಿಲ್ಲ. ವೇಗವಾಗಿ ಹರಡುವ ರೋಗವು ಮಾನವ ದೇಹದಲ್ಲಿನ ಆಂತರಿಕ ಮತ್ತು ಬಾಹ್ಯ ಅಂಗಗಳಿಂದ ರಕ್ತಸ್ರಾವ ಉಂಟುಮಾಡುತ್ತದೆ. ಮಾರಣಾಂತಿಕ ಕಾಯಿಲೆಯ ಪ್ರತಿ ಐದು ಪ್ರಕರಣಗಳಲ್ಲಿ ಐದನೇ ಒಂದು ಭಾಗದಷ್ಟು ಸಾವು ಸಂಭವಿಸುತ್ತದೆ. ವೈರಸ್‌ನ ಮೊದಲ ಪ್ರಕರಣವು 1979ರಲ್ಲಿ ಇರಾಕ್‌ನಲ್ಲಿ ವರದಿಯಾಗಿದೆ. ಇಂಥ ಕಾಯಿಲೆ ಪ್ರಕರಣಗಳು ರೈತರು, ಕಸಾಯಿಖಾನೆ ಕಾರ್ಮಿಕರು ಮತ್ತು ಪಶುವೈದ್ಯರಲ್ಲಿ ಹೆಚ್ಚಾಗಿ ಕಂಡು ಬರುತ್ತವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಇರಾಕ್‌ನಲ್ಲಿ ಪ್ರತಿ ವರ್ಷ ಐದಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈ ಬಾರಿ ಈ ಸಂಖ್ಯೆ ಅನಿರೀಕ್ಷಿತವಾಗಿದೆ ಎಂದು ಧಿ ಖಾರ್ ಪ್ರಾಂತ್ಯದ ವೈದ್ಯಕೀಯ ಅಧಿಕಾರಿ ಹೈದರ್ ಹಂಟೌಕ್ ಹೇಳಿದ್ದಾರೆ.
ಇರಾಕ್‌ನ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಅಹ್ಮದ್ ಜೌಟೆನ್ ಮಾತನಾಡಿ, ಇರಾಕ್‌ನಲ್ಲಿ ಈ ರೋಗವು ಅತಿರೇಕವಾಗಿರಲು ಹಲವು ಕಾರಣಗಳಿವೆ. 2020-2021ರ ನಡುವೆ ಕೋವಿಡ್‌ನಿಂದಾಗಿ ಜಾನುವಾರುಗಳ ಮೇಲೆ ಕೀಟನಾಶಕ ಸಿಂಪಡಿಸದಿರುವುದು ಮತ್ತು ಜಾಗತಿಕ ತಾಪಮಾನ ಏರಿಕೆಯು ರೋಗ ಹರಡಲು ಪ್ರಮುಖ ಕಾರಣ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಇದರ ಹಾವಳಿ ಹೆಚ್ಚು. ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್, ಕನ್ನಡಕ ಮತ್ತು ಮಾಸ್ಕ್ ಧರಿಸಿ ಜಾನುವಾರುಗಳಿಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ. ಜುಲೈನಲ್ಲಿ ಹಬ್ಬಗಳಿರುವ ಕಾರಣ ಮತ್ತು ಪ್ರಾಣಿಗಳ ಮಾಂಸ ಮಾರಾಟದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.