ವಾಷಿಂಗ್ಟನ್/ಟೆಲ್ ಅವಿವ್:ಹಮಾಸ್ ಉಗ್ರರ ದಮನಕ್ಕೆ ಇಸ್ರೇಲ್ ನಡೆಸುತ್ತಿರುವ ವಾಯುದಾಳಿಯು ಗಾಜಾವನ್ನು ಛಿದ್ರ ಮಾಡುತ್ತಿದೆ. 24 ಗಂಟೆಯಲ್ಲಿ 400 ಉಗ್ರ ನೆಲೆಗಳನ್ನು ನಾಶ ಮಾಡಿದ್ದಾಗಿ ಇಸ್ರೇಲ್ ಹೇಳಿದೆ. ಇದರಲ್ಲಿ 141 ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ. ಈ ಎಲ್ಲ ವಿದ್ಯಮಾನಗಳ ಮಧ್ಯೆ ಅಮೆರಿಕ ತನ್ನ ರಕ್ಷಣಾ ಸಲಹೆಗಾರರನ್ನು ಇಸ್ರೇಲ್‌ಗೆ ಕಳುಹಿಸಿದ್ದರೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಟೆಲ್ ಅವಿವ್ಗೆ ಭೇಟಿ ನೀಡಿದ್ದಾರೆ.
ಹಮಾಸ್ ಉಗ್ರಗಾಮಿಗಳ ವಿರುದ್ಧ ನಿರೀಕ್ಷಿತ ನೆಲದ ಆಕ್ರಮಣಕ್ಕೆ ಸಜ್ಜಾಗುತ್ತಿರುವ ಇಸ್ರೇಲ್ ಪಡೆಗಳು, ಗಾಜಾ ಪಟ್ಟಿಯಲ್ಲಿರುವ ಉಗ್ರ ನೆಲೆಗಳ ಧ್ವಂಸಕ್ಕೆ ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಈ ಯುದ್ಧವು ವ್ಯಾಪಕ ಹಾನಿಯನ್ನು ತರಬಹುದು ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.
ಯುದ್ಧ ಆರಂಭವಾಗಿ 18 ನೇ ದಿನವಾದ ಮಂಗಳವಾರದ ಹೊತ್ತಿಗೆ ಕನಿಷ್ಠ 5,087 ಪ್ಯಾಲೆಸ್ಟೈನಿಯನ್ನರು ಸಾವನ್ನಪ್ಪಿದ್ದಾರೆ. 15,270 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ವಿದೇಶಿಯರು ಸೇರಿದಂತೆ 222 ಜನರನ್ನು ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿದ್ದು, ಅದರಲ್ಲಿ ಇಬ್ಬರು ಅಮೆರಿಕನ್ನರು ಸೇರಿದಂತೆ ನಾಲ್ವರನ್ನು ಬಿಡುಗಡೆ ಮಾಡಲಾಗಿದೆ.
ಇಸ್ರೇಲ್‌ಗೆ ಫ್ರಾನ್ಸ್ ಅಧ್ಯಕ್ಷರ ಭೇಟಿ:ಯುದ್ಧದ ನಡುವೆ ಈಚೆಗಷ್ಟೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‌ಗೆ ಭೇಟಿ ನೀಡಿ ಬೆಂಬಲ ನೀಡಿದ್ದರು. ಇಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಟೆಲ್ ಅವೀವ್‌ಗೆ ಭೇಟಿ ನೀಡಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಮ್ಯಾಕ್ರಾನ್ ಗಾಜಾದಲ್ಲಿ ಹಮಾಸ್ ಉಗ್ರರ ವಶದಲ್ಲಿರುವ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
24 ಗಂಟೆಗಳಲ್ಲಿ 400 ಉಗ್ರ ನೆಲೆಗಳು ನಾಶ:ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರ ನೆಲೆಗಳ ಪೈಕಿ ಕಳೆದ 24 ಗಂಟೆಗಳಲ್ಲಿ 400ಕ್ಕೂ ಹೆಚ್ಚು ಸ್ಥಳಗಳನ್ನು ಧ್ವಂಸ ಮಾಡಿದ್ದಾಗಿ ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ. ಹಮಾಸ್ ಉಗ್ರರು ಇಸ್ರೇಲ್ ಕಡೆಗೆ ರಾಕೆಟ್‌ಗಳನ್ನು ಹಾರಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಐಡಿಎಫ್ ಕಾರ್ಯಾಚರಣೆ ನಡೆಸಿ ಉಗ್ರರು ಬಳಸುತ್ತಿದ್ದ ಸುರಂಗಗಳನ್ನೂ ನಾಶ ಮಾಡಲಾಗಿದೆ. ಸಮುದ್ರದ ಮೂಲಕ ಇಸ್ರೇಲ್‌ಗೆ ನುಸುಳಲು ಇವುಗಳು ಅನುಕೂಲಕರವಾಗಿದ್ದವು ಎಂದು ಹೇಳಿದೆ.
ಇಸ್ರೇಲ್‌ಗೆ ಅಮೆರಿಕದ ರಕ್ಷಣಾ ಸಲಹೆಗಾರ:ಭೂಸೇನಾದಳ ಗಾಜಾದೊಳಕ್ಕೆ ನುಗ್ಗಲು ಸಜ್ಜಾಗಿರುವುದರ ಮಧ್ಯೆ ಇಂದು ಅಮೆರಿಕದ ಸೇನೆಯ ಕೇಂದ್ರ ಕಚೇರಿಯಾದ ಪೆಂಟಗನ್ನಿಂದ ರಕ್ಷಣಾ ಸಲಹೆಗಾರರನ್ನು ಇಸ್ರೇಲ್‌ಗೆ ಕಳುಹಿಸಲಾಗಿದೆ. ಭೂಸೇನಾ ಪಡೆಯ ಯುದ್ಧತಂತ್ರ ಪಾರಂಗತರಾದ ಲೆಫ್ಟಿನೆಂಟ್ ಜನರಲ್ ಜೇಮ್ಸ್ ಗ್ಲಿನ್ ಇಸ್ರೇಲ್‌ಗೆ ಬಂದಿಳಿದಿದ್ದಾರೆ.
ಇದನ್ನೂ ಓದಿ:ಏನಿದು ಐರನ್ ಡೋಮ್? ಇಸ್ರೇಲ್ನ ರಕ್ಷಣೆಗೆ ಇದೆಷ್ಟು ಸಮರ್ಥ?