ಇಸ್ಲಾಮಾಬಾದ್ (ಪಾಕಿಸ್ತಾನ) :ಕಚ್ಚಾತೈಲ ಪೂರೈಕೆಗಾಗಿ ರಷ್ಯಾ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ ಮತ್ತು ಈ ನಿಟ್ಟಿನಲ್ಲಿ ಎರಡೂ ದೇಶಗಳು ದೀರ್ಘಾವಧಿಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಮಾಸ್ಕೋದಿಂದ ಇಸ್ಲಾಮಾಬಾದ್‌ಗೆ ತೈಲ ಆಮದನ್ನು ನಿರ್ದಿಷ್ಟವಾಗಿ ನಿರ್ವಹಿಸಲು ವಿಶೇಷ ಉದ್ದೇಶದ ವ್ಯವಸ್ಥೆಯೊಂದನ್ನು (SPV) ರಚಿಸಲು ಪಾಕಿಸ್ತಾನ ಮತ್ತು ರಷ್ಯಾ ಒಪ್ಪಿಕೊಂಡಿದ್ದವು.
ಆದಾಗ್ಯೂ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಇಸ್ಲಾಮಾಬಾದ್‌ನ ವಿಳಂಬದಿಂದಾಗಿ ಮಾಸ್ಕೋ ಈಗ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯುತ್ತಿದೆ. ವಿಶೇಷವಾಗಿ ತೈಲ ಪೂರೈಕೆಯ ಮೇಲಿನ ರಿಯಾಯಿತಿಗಳ ವಿಷಯದಲ್ಲಿ ಮಾಸ್ಕೊ ಹಿಂದೇಟು ಹಾಕುತ್ತಿದೆ. ಇಸ್ಲಾಮಾಬಾದ್ ಮತ್ತು ಮಾಸ್ಕೋ ಎರಡೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿವೆ ಎಂದು ತೋರುತ್ತಿದೆ ಎಂದು ಒಪ್ಪಂದದ ಬಗ್ಗೆ ತಿಳಿದಿರುವ ಸರ್ಕಾರಿ ಮೂಲವೊಂದು ಹೇಳಿದೆ. ಅಂದರೆ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವುದು ಇನ್ನು ಮುಂದೆ ಸಾಧ್ಯವಿಲ್ಲ ಎನ್ನಲಾಗಿದೆ. ರಷ್ಯಾ ಪಾಕಿಸ್ತಾನಕ್ಕೆ ಪೂರೈಸುವ ತೈಲದ ಮೇಲೆ ನೀಡುವ ರಿಯಾಯಿತಿಗಳ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮೂಲಗಳು ಹೇಳಿವೆ.
ಭಾರತಕ್ಕೆ ತೈಲ ಪೂರೈಸುತ್ತಿರುವ ಪ್ಲ್ಯಾಟ್ಸ್ ಸೂಚ್ಯಂಕದ (Platts index) ತೈಲ ಬೆಲೆಗಳ ಆಧಾರದಲ್ಲಿಯೇ ತೈಲ ನೀಡುವುದಾಗಿ ರಷ್ಯಾ ಹೇಳಿದೆ. ರಷ್ಯಾದ ತೈಲ ಬೆಲೆಗಳು ಪ್ಲ್ಯಾಟ್ಸ್ ಸೂಚ್ಯಂಕದ ಏರಿಳಿತದೊಂದಿಗೆ ಬದಲಾಗುತ್ತಿರುತ್ತವೆ ಮತ್ತು ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ಶಾಶ್ವತ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ ಎಂಬುದು ಇದರ ಅರ್ಥವಾಗಿದೆ. ಪಾಕಿಸ್ತಾನದ ವಿಷಯಕ್ಕೆ ಬಂದರೆ, ಪಾಕಿಸ್ತಾನ ಸರ್ಕಾರವು ಎರಡು ಸೂತ್ರಗಳ ತೈಲ ಒಪ್ಪಂದಕ್ಕೆ ಒತ್ತಾಯಿಸುತ್ತಿದೆ.