ನೈರೋಬಿ:ಪಶ್ಚಿಮ ಕೀನ್ಯಾದ ಜನನಿಬಿಡ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್, ಇತರ ವಾಹನಗಳು ಮತ್ತು ಪಾದಚಾರಿಗಳ ಮೇಲೆ ಹರಿದ ಕಾರಣ 48 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ. ಸ್ಥಳದಲ್ಲಿ ಭೀಕರತೆ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕೆರಿಚೋ ಮತ್ತು ನಕುರು ಪಟ್ಟಣಗಳ ನಡುವಿನ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಟ್ರಕ್ ಅಡಿಗೆ ಸಿಲುಕಿ 30 ಕ್ಕೂ ಅಧಿಕ ಜನರು ತೀವ್ರ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಹೇಗಾಯ್ತು?:ಹೆದ್ದಾರಿಯಲ್ಲಿ ಟ್ರಕ್ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ರಸ್ತೆ ಪಕ್ಕ ಸಣ್ಣ ವ್ಯಾಪಾರಸ್ಥರು, ಅಂಗಡಿಗಳು, ಇತರ ವಾಹನಗಳ ಮೇಲೆ ಟ್ರಕ್ ಯರ್ರಾಬಿರ್ರಿಯಾಗಿ ಹತ್ತಿಕೊಂಡು ಹೋಗಿದೆ. ಟ್ರಕ್ ಚಕ್ರದಡಿ ಸಿಲುಕಿದ ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 48 ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಟ್ರಕ್ ಚಕ್ರಕ್ಕೆ ಸಿಲುಕಿದ್ದಾರೆ. 30 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಕೆರಿಚೋ ಕಡೆಗೆ ಪ್ರಯಾಣಿಸುತ್ತಿತ್ತು. ನಿಯಂತ್ರಣಕ್ಕೆ ಸಿಗದೆ 8 ವಾಹನಗಳು, ಹಲವಾರು ಮೋಟಾರು ಸೈಕಲ್‌ಗಳು, ರಸ್ತೆಬದಿಯಲ್ಲಿದ್ದ ಜನರು, ವ್ಯಾಪಾರಸ್ಥರು, ದಾರಿಹೋಕರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ರಿಫ್ಟ್ ವ್ಯಾಲಿಯ ಪ್ರಾದೇಶಿಕ ಪೊಲೀಸ್ ಕಮಾಂಡರ್ ಟಾಮ್ ಎಂಬೋಯಾ ಒಡೆರೊ ತಿಳಿಸಿದ್ದಾರೆ.
ಅಧ್ಯಕ್ಷ ರುಟೊ ಸಂತಾಪ:ಇನ್ನು, ಘಟನೆಗೆ ಸಂಬಂಧಿಸಿದಂತೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಕಿಪ್ಚುಂಬಾ ಮುರ್ಕೊಮೆನ್ ತಿಳಿಸಿದ್ದಾರೆ. ಇದುವರೆಗೆ 45 ಜನರ ಶವಗಳು ಸಿಕ್ಕಿವೆ. ತೀವ್ರ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆರಿಚೋ ಕೌಂಟಿ ಆಸ್ಪತ್ರೆಯ ಹಿರಿಯ ವೈದ್ಯ ಕಾಲಿನ್ಸ್ ಕಿಪ್‌ಕೋಚ್ ತಿಳಿಸಿದ್ದಾರೆ.