ವಾಷಿಂಗ್ಟನ್:ವಿಶ್ವಕ್ಕೇ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ. ವೈರಾಣು ಕುರಿತು ಅಧ್ಯಯನ ನಡೆಸಿರುವ ಯುಎಸ್ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ತನ್ನ ವರ್ಗೀಕರಿಸಿದ ವರದಿಯನ್ನು ಶ್ವೇತಭವನಕ್ಕೆ ನೀಡಿದೆ. ಈ ಗುಪ್ತಚರ ಮಾಹಿತಿಯನ್ನು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಡಿಪಾರ್ಟ್ಮೆಂಟ್ ಆಫ್ ಎನರ್ಜಿಯ ಅಧ್ಯಯನದಲ್ಲಿ ಹೇಳಿದಂತೆ ಕೋವಿಡ್ -19 ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಅಚಾನಕ್ಕಾಗಿ ಹರಡಿರಬಹುದು. ಅದು ಬಳಿಕ ಇಡೀ ವಿಶ್ವಾದ್ಯಂತ ಹರಡಿತು ಎಂದು ಹೇಳಿದೆ. ರಾಷ್ಟ್ರೀಯ ಗುಪ್ತಚರ ಸಮಿತಿಯ ಈ ವರದಿಯನ್ನು ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಇತರ ನಾಲ್ಕು ಏಜೆನ್ಸಿಗಳು ಸಹಮತಿಸಿದರೆ, ಇನ್ನೂ ಎರಡು ಯಾವುದೇ ಒಮ್ಮತಕ್ಕೆ ಬಂದಿಲ್ಲ. ಈ ಹಿಂದೆಯೂ ಸಹ 2021 ರಲ್ಲಿ ನಡೆಸಿದ ಅಧ್ಯಯನಲ್ಲಿ ಚೀನಾದಲ್ಲಿ ಲ್ಯಾಬ್ನಿಂದಲೇ ಕೊರೊನಾ ವೈರಸ್ ಸೋರಿಕೆಯಾ ಸಾಂಕ್ರಾಮಿಕ ರೋಗ ಹರಡಿತ್ತು ಎಂದು ಎಫ್‌ಬಿಐ ಹೇಳಿತ್ತು. ಈಗ ಮತ್ತೊಂದು ಅಧ್ಯಯನವೂ ಚೀನಾದತ್ತಲೇ ಬೊಟ್ಟು ಮಾಡಿ ತೋರಿಸಿದೆ.
'ಕೊರೊನಾಜನಕ' ವುಹಾನ್?:ಚೀನಾದ ವುಹಾನ್‌ನಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಸೋಂಕು ಪಸರಿಸಿದ ಬಳಿಕ ಅದರ ತಡೆಗಾಗಿ ಚೀನಾ ಸರ್ಕಾರ ಅತ್ಯಂತ ಕಠಿಣವಾದ ಲಾಕ್‌ಡೌನ್‌ಗಳು, ಸಂಪರ್ಕ ನಿಷೇಧ, ಪ್ರಯಾಣದ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. 2019 ರ ಕೊನೆಯಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ವೈರಸ್‌ನ ಮೂಲದ ಬಗ್ಗೆ ವಿಶ್ವವೇ ಅನುಮಾನದ ಕಣ್ಣಿನಿಂದ ನೋಡುತ್ತಿದೆ.