ವಾಷಿಂಗ್ಟನ್ (ಅಮೆರಿಕ):ಅಮೆರಿಕದ COVID-19 ಸಂಯೋಜಕ (response coordinator) ಭಾರತೀಯ - ಅಮೆರಿಕನ್ ವೈದ್ಯ ಡಾ ಆಶಿಶ್ ಝಾ ಅವರು ಜೂನ್ ಅಂತ್ಯದ ವೇಳೆಗೆ ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. 52 ವರ್ಷದ ಝಾ ಅವರನ್ನು ಏಪ್ರಿಲ್ 2022 ರಲ್ಲಿ ಅಮೆರಿಕಾದ COVID-19 ರ ಸಂಯೋಜಕರಾಗಿ ನೇಮಕ ಮಾಡಲಾಗಿತ್ತು.
ಈ ಕರ್ತವ್ಯಕ್ಕೆ ಆಯ್ಕೆಯಾಗುವ ಮೊದಲು ಅವರು ಬ್ರೌನ್ ವಿಶ್ವವಿದ್ಯಾಲಯದಲ್ಲಿ ವಾರ್ಸಿಟಿಯ ಸಾರ್ವಜನಿಕ ಆರೋಗ್ಯ ಶಾಲೆಯ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಮೆರಿಕದಲ್ಲಿ ಕೋವಿಡ್ ಹೆಚ್ಚಿದ ಹಿನ್ನೆಲೆ ಕೋವಿಡ್ 19 ನಿರ್ವಹಣೆಗಾಗಿ ಆಗ ಡಾ. ಆಶಿಶ್ ಝಾ ಅವರನ್ನು ಆರೋಗ್ಯ ಸಲಹೆಗಾರರಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದರು. ಈಗ ಕೋವಿಡ್ 19 ರ ಪ್ರಕರಣಗಳು ಇಳಿಕೆ ಆಗಿದ್ದು,ಕೋವಿಡ್ ಸಾವು ನೋವುಗಳೂ ಇಳಿಕೆಯಾಗಿವೆ. ಹಾಗಾಗಿ ಶ್ವೇತಭವನವು ಗುರುವಾರ ಸಂಯೋಜಕ ಹುದ್ದೆಯಿಂದ ಡಾ ಆಶಿಶ್ ಝಾ ಅವರ ನಿರ್ಗಮನವನ್ನು ಪ್ರಕಟಿಸಿದೆ. ಈ ಹುದ್ದೆಯನ್ನು ಝಾ ಅವರು ತೊರೆದ ನಂತರ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಆರೋಗ್ಯ ಶಾಲೆಯ ಡೀನ್ ಆಗಿ ಹಿಂದಿನಂತೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.
COVID-19 ಇನ್ನು ಮುಂದೆ ನಮ್ಮ ದೈನಂದಿನ ಜೀವನಕ್ಕೆ ಅಡ್ಡಿಯಾಗುವುದಿಲ್ಲ. ಕಳೆದ ವರ್ಷ COVID-19 ಸಂಯೋಜಕರಾಗಿ ಡಾ ಆಶಿಶ್ ಝಾ ಅವರನ್ನು ಹುದ್ದೆಗೆ ನೇಮಿಕ ಮಾಡಿದ್ದೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಅಮೆರಿಕದ ಪ್ರಮುಖ ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ಒಬ್ಬರಾಗಿದ್ದು, ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದೂ ಅವರು ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.