ಕರ್ನಾಟಕ

karnataka

ETV Bharat / international

'ನೆರೆಯ ದೇಶಗಳು ಚಂದ್ರನನ್ನು ತಲುಪಿವೆ, ಆದರೆ ಪಾಕಿಸ್ತಾನ ಇನ್ನೂ ಭೂಮಿಯಿಂದ ಮೇಲಕ್ಕೇ ಎದ್ದಿಲ್ಲ': ನವಾಜ್ ಷರೀಫ್ - ಮಾಜಿ ಪ್ರಧಾನಿ ನವಾಜ್ ಷರೀಫ್​

ಮಾಜಿ ಪ್ರಧಾನಿ ನವಾಜ್ ಷರೀಫ್​ ಇಸ್ಲಾಮಾಬಾದ್​ನಲ್ಲಿ ಭಾಷಣದ ವೇಳೆ ತಮ್ಮ ದೇಶ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

Former Prime Minister Nawaz Sharif
ಮಾಜಿ ಪ್ರಧಾನಿ ನವಾಜ್ ಷರೀಫ್

By ETV Bharat Karnataka Team

Published : Dec 21, 2023, 11:18 AM IST

ಇಸ್ಲಾಮಾಬಾದ್(ಪಾಕಿಸ್ತಾನ):ನಮ್ಮ ನೆರೆಯ ದೇಶಗಳು ಚಂದ್ರನನ್ನು ತಲುಪಿವೆ. ಆದರೆ, ನಾವಿನ್ನೂ ಭೂಮಿಯಿಂದ ಮೇಲಕ್ಕೇ ಎದ್ದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತೊಮ್ಮೆ ಭಾರತವನ್ನು ಶ್ಲಾಘಿಸಿದ್ದಾರೆ.

ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿರುವ ನವಾಜ್ ಷರೀಫ್ ಬುಧವಾರ ಪಿಎಂಎಲ್-ಎನ್ ಕೇಡರ್ ಅನ್ನು ಉದ್ದೇಶಿಸಿ ಇಸ್ಲಾಮಾಬಾದ್​ನಲ್ಲಿ ಭಾಷಣ ಮಾಡಿದ್ದರು. ಈ ವೇಳೆ, ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ದೇಶದ ಭೀಕರ ಆರ್ಥಿಕ ಪರಿಸ್ಥಿತಿಗೆ ನಾವೇ(ಪಾಕಿಸ್ತಾನವೇ)ಕಾರಣ. ನಮ್ಮ ನೆರೆಹೊರೆಯವರು ಚಂದ್ರನನ್ನು ತಲುಪಿದ್ದಾರೆ. ಆದರೆ, ನಾವು (ಪಾಕಿಸ್ತಾನ) ಇಲ್ಲಿಯವರೆಗೆ ನೆಲದಿಂದ ಮೇಲಕ್ಕೆ ಎದ್ದಿಲ್ಲ. ಇನ್ನು ಮುಂದೆ ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ನಮ್ಮ ಅವನತಿಗೆ ನಾವೇ ಜವಾಬ್ದಾರರು, ಇಲ್ಲದಿದ್ದರೆ ಪಾಕಿಸ್ತಾನ ಈ ಹೊತ್ತಿಗೆ ಎಲ್ಲಿಗೋ ತಲುಪುತ್ತಿತ್ತು ಎಂದು ಹೇಳಿದರು.

ಮುಂದುವರೆದು, 2013ರಲ್ಲಿ ಪಾಕಿಸ್ತಾನ ಅತಿಯಾದ ವಿದ್ಯುತ್ ಲೋಡ್ ಶೆಡ್ಡಿಂಗ್​ನ್ನು ಎದುರಿಸಿತ್ತು. ನಾವು ಆ ವೇಳೆ ಅಧಿಕಾರಕ್ಕೆ ಬಂದು ಆ ಸಮಸ್ಯೆಯನ್ನು ಪರಿಹರಿಸಿದೆವು. ಜತೆಗೆ ರಾಷ್ಟ್ರಾದ್ಯಂತ ಭಯೋತ್ಪಾದನೆಯನ್ನು ಮಟ್ಟ ಹಾಕಿದ್ದೇವೆ. ಕರಾಚಿಯಲ್ಲಿ ಶಾಂತಿಯನ್ನು ಸ್ಥಾಪಿಸಿದ್ದೇವೆ, ಅಲ್ಲದೇ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಸಿಪಿಇಸಿ (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್)ತರಲಾಯಿತು. ಈ ಮೂಲಕ ದೇಶದಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಯುಗ ಪ್ರಾರಂಭವಾಯಿತು ಎಂದು ತಾವು ಪ್ರಧಾನಿಯಾಗಿದ್ದ ವೇಳೆ ಪಾಕಿಸ್ತಾನದಲ್ಲಾದ ಧನಾತ್ಮಕ ಬೆಳೆವಣಿಗೆಯ ಬಗ್ಗೆ ಮಾಜಿ ಪ್ರಧಾನಿ ನವಾಜ್​ ಷರೀಫ್​ ಸಮರ್ಥಿಸಿಕೊಂಡರು. ಪಾಕಿಸ್ತಾನ ಅಧಿಕೃತ ಮಾಧ್ಯಮದ ವರದಿ ಪ್ರಕಾರ, ನವಾಜ್ ಷರೀಫ್ ಅವರು ಮೂರು ಬಾರಿ 1993, 1999 ಮತ್ತು 2017 ರಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಭಾಷಣ ಮುಂದುವರೆಸಿದ ಷರೀಫ್, ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟಿಗೆ ಈಗ ಯಾರನ್ನು ದೂಷಿಸಬೇಕು ಎಂದು ಪ್ರಶ್ನಿಸಿ, "ನಾವು ನಮ್ಮ ಕಾಲಿಗೆ ಗುಂಡು ಹಾರಿಸಿಕೊಂಡಿದ್ದೇವೆ" ಎಂದು ಪರಿಸ್ಥಿಯ ಬಗ್ಗೆ ವಿವರಿಸಿದರು. ರಾಷ್ಟ್ರವು ಅಭಿವೃದ್ಧಿ ಹೊಂದಲು ಬಯಸಿದರೆ ಮೊದಲು ಪಾಕಿಸ್ತಾನ ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಇಲ್ಲಿವರೆಗೆ ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವು ಮಹಿಳೆಯರಿಗೆ ಆದ್ಯತೆ ನೀಡಿದೆ. ಆ ದೇಶಗಳೆಲ್ಲ ಅಭಿವೃದ್ಧಿಗಾಗಿ ಮಹಿಳೆಯರನ್ನು ಮುಂದೆ ತಂದಿದ್ದಾರೆ. ಮಹಿಳೆಯರು ಅಭಿವೃದ್ಧಿಗೆ ಸಮಾನ ಭಾಗಿಗಳಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಮಹಿಳೆಯರು ಪುರುಷರೊಂದಿಗೆ ಸಮಾನವಾಗಿದ್ದು, ಈ ದೇಶದ ಸೇವೆಯಲ್ಲಿಯೂ ಮುಂದೆ ಹೋಗಬೇಕು ಎಂದು ದೇಶದ ಜನತೆಗೆ ಅರಿವು ಮೂಡಿಸುವಲ್ಲಿ ಪ್ರಯತ್ನಿಸಿದರು.

ಇದನ್ನೂ ಓದಿ:'ಕಾಶ್ಮೀರ ಸಮಸ್ಯೆ ಇನ್ನಷ್ಟು ಜಟಿಲ': ಸುಪ್ರೀಂ ಕೋರ್ಟ್​ ತೀರ್ಪಿಗೆ ಪಾಕ್​ ಮಾಜಿ ಪಿಎಂ ಇಮ್ರಾನ್​ ಖಾನ್​ ಆಕ್ಷೇಪ

ABOUT THE AUTHOR

...view details