ವಾಷಿಂಗ್ಟನ್, ಅಮೆರಿಕ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುಎಸ್ ಕಾಂಗ್ರೆಸ್ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಶ್ವೇತಭವನದಲ್ಲಿ ಔತಣಕೂಟಕ್ಕೆ ಆಗಮಿಸಿದರು. ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಭೇಟಿಯ ಭಾಗವಾಗಿ ಭೋಜನಕೂಟ ಆಯೋಜಿಸಿದ್ದರು. ಶ್ವೇತಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿ ಸ್ವಾಗತಿಸಿದರು.
ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಆಯೋಜಿಸಲಾದ ವಿಶೇಷ ಔತಣಕೂಟಕ್ಕೆ ಟೆಕ್ ಜಗತ್ತಿನ ಚಲನಚಿತ್ರದ ಕಲಾವಿದರು, ಫ್ಯಾಷನ್ ಉದ್ಯಮದ ಗಣ್ಯರು ಮತ್ತು ಕೈಗಾರಿಕೋದ್ಯಮಿಯ ಕೋಟ್ಯಧಿಪತಿಳು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಮಂತ ವ್ಯಕ್ತಿಗಳ ದಂಡೇ ಹರಿದುಬಂದಿದ್ದು ಗಮನಾರ್ಹ.
ಔತಣಕೂಟದಲ್ಲಿ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ಮಾಪಕ ಎಂ. ನೈಟ್ ಶ್ಯಾಮಲನ್, ಮಾನವ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್ III, ಟೆನ್ನಿಸ್ ದಂತಕಥೆ ಬಿಲ್ಲಿ ಜೀನ್ ಕಿಂಗ್, ಫ್ಯಾಶನ್ ಡಿಸೈನರ್ ರಾಲ್ಫ್ ಲಾರೆನ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಜೋಶುವಾ ಬೆಲ್ ಮತ್ತು ಉದ್ಯಮಿ ಫ್ರಾಂಕ್ ಇಸ್ಲಾಂ, ಭಾರತೀಯ ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಆನಂದ್ ಮಹೀಂದ್ರಾ, ಆ್ಯಪಲ್ ಸಿಇಒ ಟಿಮ್ ಕುಕ್ ಮತ್ತು ಕಾರ್ಪೊರೇಟ್ ನಾಯಕಿ ಇಂದಿರಾ ನೂಯಿ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಡೋಬ್‌ನ ಸಿಇಒಗಳಾದ ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಮತ್ತು ಶಾಂತನು ನಾರಾಯಣ್ ಸಹ ಔತಣಕೂಟ ಕಾರ್ಯಕ್ರಮದ ಅತಿಥಿಗಳಾಗಿದ್ದರು.
ಭಾರತೀಯ ಅಮೆರಿಕನ್ನರ ಶಾಸಕರ ಪಟ್ಟಿಯಲ್ಲಿ ಪ್ರಮೀಳಾ ಜಯಪಾಲ್, ಶ್ರೀ ತಾನೇದಾರ್, ರೋ ಖನ್ನಾ, ಅಮಿ ಬೇರಾ ಮತ್ತು ರಾಜಾ ಕೃಷ್ಣಮೂರ್ತಿ ಇದ್ದರು. ಔತಣಕೂಟದಲ್ಲಿ ಬೈಡನ್ ಕುಟುಂಬದ ಸದಸ್ಯರಾದ ಹಂಟರ್ ಬೈಡನ್, ಆಶ್ಲೇ ಬೈಡನ್, ಜೇಮ್ಸ್ ಬೈಡನ್ ಮತ್ತು ನವೋಮಿ ಬೈಡನ್ ನೀಲ್. ಪ್ರಧಾನಿ ಮೋದಿ ಅವರಿಗೆ ಉಪಾಹಾರ ಕೂಟ ಏರ್ಪಡಿಸಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಯುಎಸ್ ರಾಜತಾಂತ್ರಿಕರು ಮತ್ತು ಬೈಡನ್ ಆಡಳಿತದ ಸದಸ್ಯರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದ್ದರು.