ಟೋಕಿಯೊ:ಎಲ್‌ಜಿಬಿಟಿಕ್ಯು (ಸಲಿಂಗಿ) ಜನರ ಬಗ್ಗೆ ಇತ್ತೀಚೆಗೆ ತಾರತಮ್ಯದ ಹೇಳಿಕೆ ನೀಡಿದ್ದ ಜಪಾನ್ ಪ್ರಧಾನಿಯ ಹಿರಿಯ ಸಹಾಯಕನೊಬ್ಬನನ್ನು ಹುದ್ದೆಯಿಂದ ವಜಾಗೊಳಿಸಲು ದೇಶದ ಪ್ರಧಾನಿ ಫುಮಿಯೋ ಕಿಷಿದಾ ನಿರ್ಧರಿಸಿದ್ದಾರೆ. ತಮ್ಮ ಕಚೇರಿಯ ಕಾರ್ಯದರ್ಶಿ ಮಸಯೋಶಿ ಅರಾಯ್ ಅವರು ಇತ್ತೀಚೆಗೆ ಜಪಾನಿನ ಮಾಧ್ಯಮಗಳಿಗೆ LGBTQ ಜನರನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಹೇಳಿಕೆ ನೀಡಿದ ನಂತರ ಅವರನ್ನು ಕಚೇರಿಯ ಹುದ್ದೆಯಿಂದ ವಜಾಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಸಯೋಶಿ ಅರಾಯ್ ಅವರು ಶುಕ್ರವಾರ ತಾವು ನೀಡಿದ್ದ ಹೇಳಿಕೆಗಳನ್ನು ಹಿಂಪಡೆದು, ಕ್ಷಮೆಯಾಚಿಸಿದ್ದಾರೆ.
ವೈವಿಧ್ಯತೆಯನ್ನು ಉತ್ತೇಜಿಸುವ ತಮ್ಮ ಸರ್ಕಾರದ ನಿಲುವಿಗೆ ಈ ಹೇಳಿಕೆ ವಿರುದ್ಧ.. ಜಪಾನ್ ಪ್ರಧಾನಿ ಫುಮಿಯೋ ಕಿಷಿದಾ ಮಾಧ್ಯಮದ ಜೊತೆ ಮಾತನಾಡಿ, ವೈವಿಧ್ಯತೆಯನ್ನು ಉತ್ತೇಜಿಸುವ ಆಡಳಿತದ ನಿಲುವಿಗೆ ಈ ಹೇಳಿಕೆಗಳು ವಿರುದ್ಧವಾಗಿವೆ. ಈ ಹೇಳಿಕೆಗಳನ್ನು ನೀಡಿರುವ ಕುರಿತು ಬಲವಾದ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿರುವ ಕಿಷಿದಾ, ಮಸಯೋಶಿ ಅರಾಯ್ ಅವರು ಸ್ವಯಂ ಪ್ರೇರಣೆಯಿಂದ ಹುದ್ದೆಗೆ ರಾಜೀನಾಮೆ ನೀಡಿ ಹೊರಡಬಹುದು ಎಂದಿದ್ದಾರೆ.
ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ.. ಮಸಯೋಶಿ ಅರಾಯ್ ಅವರು ಎಲ್‌ಜಿಬಿಟಿಕ್ಯು ಜನರ ಬಗ್ಗೆ ನೀಡಿದ್ದ ಟೀಕಾತ್ಮಕ ಹೇಳಿಕೆಗಳು ದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಜಪಾನಿನ ಅಧಿಕಾರಿಗಳನ್ನು ತೊಂದರೆಗೆ ಸಿಲುಕಿಸಿದ ವಿಷಯಗಳಲ್ಲಿ ಇದು ಇತ್ತೀಚಿನ ವಿಷಯವಾಗಿದೆ.