ಅಥೆನ್ಸ್ : ಗ್ರೀಕ್‌ನಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಭದ್ರತೆ ವಿಷಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿ ಚುನಾವಣೆ ಎದುರಿಸಿದ್ದ ಕನ್ಸರ್‌ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷವು ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 2 ತಿಂಗಳ ಒಳಗಾಗಿ 2ನೇ ಬಾರಿಗೆ ಭಾನುವಾರ ಸಾರ್ವತ್ರಿಕ ಚುನಾವಣೆ ಮತದಾನ ನಡೆದಿತ್ತು.
ಅಥೆನ್ಸ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಹೊರಗೆ ಜಮಾಯಿಸಿದ ಬೆಂಬಲಿಗರು, ನೀಲಿ ಮತ್ತು ಬಿಳಿ ಬಣ್ಣದ ಪಕ್ಷದ ಧ್ವಜಗಳನ್ನು ಹಾರಿಸಿ, ಚಪ್ಪಾಳೆ ತಟ್ಟಿದರು. ಫಲಿತಾಂಶ ವೀಕ್ಷಿಸಿದಾಗ ಕನ್ಸರ್‌ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷವು ಶೇ 40.5ರಷ್ಟು ಮತಗಳನ್ನು ಪಡೆದಕೊಂಡಿದೆ. ಅವರ ಪ್ರಮುಖ ಪ್ರತಿಸ್ಪರ್ಧಿ ಎಡಪಂಥೀಯ ಸಿರಿಜಾ ಪಕ್ಷವನ್ನು ಶೇ 18ಕ್ಕೆ ತಲುಪಲು ಸಹ ಹೆಣಗಾಡಿದೆ. ಇದು ಮೇ ತಿಂಗಳ ಕೊನೆಯಲ್ಲಿ ನಡೆದ ಚುನಾವಣೆಗಳಿಗಿಂತ ಶೇ 2 ರಷ್ಟು ಕಡಿಮೆಯಾಗಿದೆ.
ಗ್ರೀಸ್‌ನ ಕನ್ಸರ್‌ವೇಟಿವ್ ನ್ಯೂ ಡೆಮಾಕ್ರಸಿ ಪಕ್ಷದ ನಾಯಕ ಹಾಗೂ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿರುವ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಆರ್ಥಿಕ ಸುಧಾರಣೆಗಳನ್ನು ವೇಗಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಅಭಿವೃದ್ಧಿಯ ಕೆಲಸಗಳಿಗೆ ಮತ್ತಷ್ಟು ವೇಗ ನೀಡಲು ಬದ್ಧವಾಗಿದ್ದೇವೆ ಎಂದು ಘೋಷಿಸಿದ್ದಾರೆ.
ಈ ಕುರಿತು ದೂರದರ್ಶನವೊಂದರಲ್ಲಿ ಹೇಳಿಕೆ ನೀಡಿದ ಅವರು, 'ಉದ್ಯೋಗವಕಾಶಗಳು ಹೆಚ್ಚಲಿದ್ದು, ಅಸಮಾನತೆ ಕಡಿಮೆ ಮಾಡುವತ್ತ ಗಮನಹರಿಸಲಿದ್ದೇವೆ. ಜನತೆಗೆ ಉತ್ತಮ ಮತ್ತು ಉಚಿತ ಸಾರ್ವಜನಿಕ ಆರೋಗ್ಯ ಸೇವೆ ನೀಡುವ ಜೊತೆಗೆ ಮತ್ತು ಪ್ರಬಲ ದೇಶಗಳೊಂದಿಗೆ ಕೈಜೋಡಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದೇವೆ' ಎಂದರು.