ಕಾಂಗೋ: ಸೆಂಟ್ರಲ್ ಆಫ್ರಿಕಾ ದೇಶ ಕಾಂಗೋದ ಪೂರ್ವಭಾಗದಲ್ಲಿ ಹಠಾತ್ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿರುವವ ಸಂಖ್ಯೆ 200 ಕ್ಕಿಂತಲೂ ಅಧಿಕವಾಗಿದೆ. ಅನೇಕರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹಾನಿಗೊಳಗಾದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲೆಹೆಯ ಆಡಳಿತಾಧಿಕಾರಿ ಥಾಮಸ್ ಬಾಕೆಂಗೆ ಮಾಧ್ಯಮಗಳೊಂದಿಗೆ ಮಾತನಾಡಿ, "ಇದುವರೆಗೆ 203 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಣೆಯಾದ ಇತರರಿಗಾಗಿ ಹುಡುಕಾಟ ಮುಂದುವರೆದಿದೆ. ಇಲ್ಲಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ" ಎಂದು ಹೇಳಿದರು.
"ನ್ಯಾಮುಕುಬಿ ಗ್ರಾಮದಲ್ಲಿ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿ ಹೋಗಿವೆ. ಶನಿವಾರ ಅವಶೇಷಗಳಡಿ, ಕೆಸರಿನಲ್ಲಿ ಹುದುಗಿ ಹೋಗಿದ್ದ ಕೆಲವರ ಮೃತದೇಹಗಳನ್ನು ಅಗೆದು ಹೊರತೆಗೆಯಲಾಗಿದೆ. ಮೃತದೇಹಗಳ ಸುತ್ತ ಜಮಾಯಿಸಿದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ಬದುಕುಳಿದವರ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಇನ್ನೊಂದೆಡೆ, ರಕ್ಷಣಾ ಕಾರ್ಯಕರ್ತರ ಪೋಸ್ಟ್‌ನ ಬಳಿ ಸಹ ಭೂಕುಸಿತ ಸಂಭವಿಸಿದೆ. ಗುರುವಾರ ಕಿವು ಸರೋವರದ ತೀರಕ್ಕೆ ಸಮೀಪವಿರುವ ಕಲೆಹೆ ಪ್ರದೇಶದ ಹಳ್ಳಿಗಳಿಗೆ ನದಿ ನೀರು ಬಂದು ಅಪ್ಪಳಿಸಿದ್ದು, ಹಲವಾರು ಗಾಯಗೊಂಡಿದ್ದಾರೆ" ಎಂದರು.
ಇದನ್ನೂ ಓದಿ :ಕರುಗುತ್ತಿವೆ ಹಿಮನದಿಗಳು , ಹಿಮಾಲಯದಲ್ಲಿ 995 ಕ್ಕೇರಿದ ಕೆರೆಗಳ ಸಂಖ್ಯೆ : ಇದು ಅಪಾಯದ ಮುನ್ಸೂಚನೆ
ಇಡೀ ಕುಟುಂಬ ಸದಸ್ಯರನ್ನು ಕಳೆದುಕೊಂಡು ಬದುಕುಳಿದ ಅನುವಾರೈಟ್ ಝಿಕುಜುವಾ ಎಂಬುವರು ಮಾತನಾಡಿ, "ಇಡೀ ಗ್ರಾಮವೇ ಪಾಳುಭೂಮಿಯಾಗಿ ಮಾರ್ಪಟ್ಟಿದೆ, ನಮ್ಮ ಭೂಮಿ, ಮನೆ ಎಲ್ಲಿತ್ತು ಎಂದು ಈಗ ನಾವು ಹೇಳಲು ಸಾಧ್ಯವಿಲ್ಲ. ಭೀಕರ ಪ್ರವಾಹಕ್ಕೆ ನೆರೆಹೊರೆಯವರನ್ನೂ ಒಳಗೊಂಡಂತೆ ನನ್ನ ಇಡೀ ಕುಟುಂಬವೇ ಬಲಿಯಾಗಿದೆ" ಎಂದು ಅಳಲು ತೋಡಿಕೊಂಡರು.