ಕಠ್ಮಂಡು, ನೇಪಾಳ:ವಿಮಾನ ಹಾರಾಟದ ವೇಳೆ ಪತಿ ಪ್ರಾಣ ಕಳೆದುಕೊಂಡಿದ್ದರೂ ಸಹ ಧೈರ್ಯದಿಂದ ಅದೇ ರಂಗವನ್ನು ಆಯ್ಕೆ ಮಾಡಿಕೊಂಡಿದ್ದರು ಪತ್ನಿ. ಪತಿ ಬಿಟ್ಟು ಹೋದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಕೋ ಪೈಲಟ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದರು ಅವರು. ಪೈಲಟ್ ಆಗುವ ಅವರ ಕನಸು ನನಸಾಗಲು ಕೆಲವೇ ಗಂಟೆಗಳು ಉಳಿದಿದ್ದವು. ಆದರೆ ಅವರು ಆಸೆ ನಿರಾಸೆಯಾಗಿದೆ. ವಿಮಾನ ಅಪಘಾತದ ರೂಪದಲ್ಲಿರುವ ಪತಿಯಂತೆ ಇಂದು ಪತ್ನಿಯೂ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಇದು ನೇಪಾಳದಲ್ಲಿ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಹ ಪೈಲಟ್ ಅಂಜು ಖತಿವಾಡ ಅವರ ದುರಂತ ಕಥೆ.
ಪೈಲಟ್ ಆಗಲು ಸಹ ಪೈಲಟ್ 100 ಗಂಟೆಗಳ ಹಾರಾಟ ಅನುಭವ ಪಡೆದಿರಬೇಕು:ಭಾನುವಾರ ನೇಪಾಳದಲ್ಲಿ 72 ಜನರಿದ್ದ ಪ್ರಯಾಣಿಕ ವಿಮಾನ ಪತನಗೊಂಡಿದ್ದು ಗೊತ್ತೇ ಇದೆ. ಅಪಘಾತ ಸಂಭವಿಸಿದ ಯೇತಿ ಏರ್‌ಲೈನ್ಸ್ ಎಟಿಆರ್-72 ವಿಮಾನದ ಪೈಲಟ್ ಆಗಿ ಹಿರಿಯ ಕ್ಯಾಪ್ಟನ್ ಕಮಲ್ ಕೆಸಿ ಕಾರ್ಯನಿರ್ವಹಿಸಿದ್ದರೆ, ಅಂಜು ಸಹ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ನೇಪಾಳದ ನಿಯಮಗಳ ಪ್ರಕಾರ, ಪೈಲಟ್ ಆಗಲು, ಸಹ ಪೈಲಟ್ ಆಗಿ 100 ಗಂಟೆಗಳ ಹಾರಾಟದ ಅನುಭವ ಹೊಂದಿರಬೇಕು.
ಕೆಲಸಕ್ಕೆ ಸೇರಿದಾಗಿನಿಂದ, ಅಂಜು ನೇಪಾಳದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಯಶಸ್ವಿಯಾಗಿ ವಿಮಾನಗಳನ್ನು ಇಳಿಸಿದ್ದಾರೆ. ATR-72 ಸಹ-ಪೈಲಟ್ ಆಗಿ ಅವಳ ಕೊನೆಯ ವಿಮಾನವಾಗಿದೆ. ಭಾನುವಾರ ಫ್ಲೈಟ್ ಲ್ಯಾಂಡ್ ಆದ ನಂತರ ಆಕೆ ಪೈಲಟ್ ಆಗಿ ಲೈಸೆನ್ಸ್ ಪಡೆಯುತ್ತಿದ್ದರು. ಅವರ ಕನಸುಗಳು ನನಸಾಗಲು ಕೆಲವೇ ನಿಮಿಷಗಳು ಬಾಕಿಯಿದ್ದವು. ಆದ್ರೆ ಅಷ್ಟರಲ್ಲೇ ಈ ವಿಮಾನ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ಅಂಜು ಸೇರಿದಂತೆ ವಿಮಾನದಲ್ಲಿದ್ದವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.
ಅಂಜು ಅವರ ಪತಿ ದೀಪಕ್ ಪೋಖ್ರೆಲ್ ಕೂಡ 16 ವರ್ಷಗಳ ಹಿಂದೆ ಯೇತಿ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುವಾಗ ಇದೇ ರೀತಿಯ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಜೂನ್ 21, 2006 ರಂದು, ದೀಪಕ್ ಸಹ ಪೈಲಟ್ ಆಗಿದ್ದ ಯೇತಿ ಏರ್‌ಲೈನ್ಸ್ ವಿಮಾನವು ನೇಪಾಲ್‌ಗಂಜ್‌ನಿಂದ ಜುಮ್ಲಾಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಯಿತು. ಈ ಘಟನೆಯಲ್ಲಿ ಆರು ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ಅವರಲ್ಲಿ ದೀಪಕ್ ಕೂಡ ಒಬ್ಬರಾಗಿದ್ದರು.