ಲಂಡನ್ (ಇಂಗ್ಲೆಂಡ್): ಭಾರತದಲ್ಲಿನ ಬಿಬಿಸಿ ಕಚೇರಿಗಳಲ್ಲಿನ ಆದಾಯ ತೆರಿಗೆ ವ್ಯವಹಾರಗಳನ್ನು ಯುನೈಟೆಡ್ ಕಿಂಗ್‌ಡಮ್ ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಬ್ರಿಟಿಷ್ ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಆದಾಯ ತೆರಿಗೆ ಇಲಾಖೆಯು ಮಂಗಳವಾರ ದೆಹಲಿ ಹಾಗೂ ಮುಂಬೈನ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಈ ದಾಳಿಗೆ ಸಂಬಂಧಿಸಿದಂತೆ ಯುಕೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಆದರೆ, ಭಾರತದಲ್ಲಿ ಬಿಬಿಸಿ ಕಚೇರಿಗಳಲ್ಲಿನ ತೆರಿಗೆ ವ್ಯವಹಾರಗಳನ್ನು ತೀರಾ ಹತ್ತಿರದಿಂದ ಗಮನಿಸುತ್ತಿದೆ ಎಂದು ಬ್ರಿಟಿಷ್ ಮೂಲಗಳು ಹೇಳಿವೆ.
ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ:ನವದೆಹಲಿಯಲ್ಲಿ ಬಿಬಿಸಿ ಅಂಗಸಂಸ್ಥೆ ಕಂಪನಿಗಳ ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತನಿಖೆ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಬಿಸಿಗೆ ಈ ಹಿಂದೆ ನೋಟಿಸ್‌ಗಳನ್ನು ನೀಡಲಾಗಿತ್ತು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು. ಸದ್ಯ ಅದರ ಲಾಭವನ್ನು ಅಧಿಕಾರಿಗಳು ಗಣನೀಯವಾಗಿ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿಯು ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಎರಡು ವಾರಗಳ ನಂತರ ಬಿಬಿಸಿ ವಿರುದ್ಧ ಐಟಿ ಕ್ರಮ ಜರುಗಿಸಿದೆ.
ಸಂಪೂರ್ಣ ಸಹಕರಿಸುತ್ತಿದ್ದೇವೆ:"ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ" ಎಂದು ಬಿಬಿಸಿ ವಕ್ತಾರರು ತಿಳಿಸಿದ್ದಾರೆ. "ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದರು. ಆದಾಯ ತೆರಿಗೆ (ಐಟಿ) ಇಲಾಖೆಯು ಬಿಬಿಸಿ ತೆರಿಗೆ ಕುರಿತು ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎಂದು ಆರೋಪಿಸಿ, ಸ್ಥಳೀಯ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ. ಸಿಬ್ಬಂದಿಯನ್ನು ಕಚೇರಿ ಆವರಣದಿಂದ ಹೊರಹೋಗದಂತೆ ಅಥವಾ ಪ್ರವೇಶಿಸದಂತೆ ತಡೆಯಲಾಗಿದೆ. ಅವರ ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.