ಸ್ಟಾಕ್‌ಹೋಮ್:ಮಹಿಳೆಯರ ಗಳಿಕೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಮೊದಲ ಸಮಗ್ರ ಮಾಹಿತಿ ನೀಡಿದ ಪ್ರಾಧ್ಯಾಪಕಿ ಕ್ಲೌಡಿಯಾ ಗೋಲ್ಡಿನ್ ಅವರಿಗೆ 2023 ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗಿದೆ.
2023 ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರಾದ ಕ್ಲೌಡಿಯಾ ಗೋಲ್ಡಿನ್ ಅವರು ಶತಮಾನಗಳಿಂದ ಮಹಿಳೆಯರ ಗಳಿಕೆ ಮತ್ತು ಅವರು ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆಯ ಮೊದಲ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ. ಅವರ ಸಂಶೋಧನೆಯು ಲಿಂಗ ಅಂತರದ ಮೂಲ, ಬದಲಾವಣೆಯ ಕಾರಣಗಳನ್ನು ಬಹಿರಂಗಪಡಿಸುತ್ತದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಸ್ ಅಕಾಡೆಮಿ ಅಭಿಪ್ರಾಯಪಟ್ಟಿದೆ.
20 ನೇ ಶತಮಾನದಲ್ಲಿ ಪ್ರಗತಿ ಹೆಚ್ಚಳ:ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ತ್ರೀ ಭಾಗವಹಿಸುವಿಕೆಯು 200 ವರ್ಷಗಳ ಹಿಂದೆ ಮೇಲ್ಮುಖವಾಗಿರಲಿಲ್ಲ ಎಂಬುದನ್ನು ಗೋಲ್ಡಿನ್ ಪ್ರಸ್ತುತಪಡಿಸಿದ್ದಾರೆ. 19ನೇ ಶತಮಾನದ ಆರಂಭದಲ್ಲಿ ವಿವಾಹಿತ ಮಹಿಳೆಯರ ಭಾಗವಹಿಸುವಿಕೆಯು ಕಡಿಮೆಯಾಗಿತ್ತು. ಆದರೆ 20ನೇ ಶತಮಾನದ ಆರಂಭದಲ್ಲಿ ಸೇವಾ ಕ್ಷೇತ್ರದ ಬೆಳವಣಿಗೆಯೊಂದಿಗೆ ಮಹಿಳೆಯರು ಭಾಗವಹಿಸುವ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು ಎಂಬುದನ್ನು ಅವರು ನಿರೂಪಿಸಿದ್ದಾರೆ.
ಮನೆ ಮತ್ತು ಕುಟುಂಬದ ಅಭಿವೃದ್ಧಿಗಾಗಿ ಮಹಿಳೆಯರ ಹೊಣೆಗಾರಿಕೆ ಮತ್ತು ಅದರಿಂದಾದ ಆರ್ಥಿಕ ಅಭಿವೃದ್ಧಿಯನ್ನೂ ಅವರ ಸಾಮಾಜಿಕ ರೂಢಿಗಳು, ರಚನಾತ್ಮಕ ಬದಲಾವಣೆಯ ಮಾದರಿಯ ಮೇಲೆ ಅವರು ವಿವರಿಸಿದ್ದಾರೆ.