ಖೆರ್ಸನ್(ಉಕ್ರೇನ್): ರಷ್ಯಾ - ಉಕ್ರೇನ್ ಯುದ್ಧದ ನಡುವೆ ದಕ್ಷಿಣ ಉಕ್ರೇನ್‌ನ ಪ್ರಮುಖ ಬೃಹತ್ ಅಣೆಕಟ್ಟು ಒಡೆದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಡ್ನೀಪರ್ ನದಿಯ ದ್ವೀಪದಲ್ಲಿನ ನೂರಾರು ಜನರು ಮಿಲಿಟರಿ ದೋಣಿ ಹಾಗೂ ತೆಪ್ಪಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ರೆಡ್ ಕ್ರಾಸ್ ತಂಡಗಳು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿವೆ. ಈ ಸಂದರ್ಭದಲ್ಲಿ ನೀರಿನಲ್ಲಿ ಒಂದು ಮಿಲಿಟರಿ ದೋಣಿ ಟ್ರಕ್ ಸ್ಥಗಿತಗೊಂಡಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿತ್ತು.
ಕಾಖೋವ್ಕಾ ಅಣೆಕಟ್ಟಿನ ಮೂಲಕ ಹರಿಯುತ್ತಿರುವ ನೀರು ಎಷ್ಟು ಅಪಾಯವನ್ನು ಉಂಟು ಮಾಡಲಿದೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಮಂಗಳವಾರ ದಕ್ಷಿಣ ಉಕ್ರೇನಿಯನ್ ನಗರದ ಖರ್ಸನ್ ಡೌನ್‌ಸ್ಟ್ರೀಮ್‌ನ ದ್ವೀಪದ ಅಕ್ಕ ಪಕ್ಕದ ಸ್ಥಳಗಳಿಂದ ತೆಪ್ಪ ಮತ್ತು ಮಿಲಿಟರಿ ದೋಣಿ ಮೂಲಕ ಜನರನ್ನು ಸ್ಥಳಾಂತರಿಸುತ್ತಿರುವುದು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಉಂಟಾದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.
"ಅವರನ್ನು ಕ್ಷಮಿಸಬಾರದು. ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ಅಣೆಕಟ್ಟನ್ನು ನಾಶಪಡಿಸಿದೆ" ಎಂದು ಉಕ್ರೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ. ರಷ್ಯಾದ ಅಧಿಕಾರಿಗಳು ಇದನ್ನು ಉಕ್ರೇನಿಯನ್ ಮಿಲಿಟರಿ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ. ರಷ್ಯನ್ನರು ಅಣೆಕಟ್ಟನ್ನು ಒಡೆದಿದ್ದಾರೆ. ಆದರೆ, ಅದರ ಪರಿಣಾಮಗಳ ಬಗ್ಗೆ ಯೋಚಿಸಲಿಲ್ಲ ಎಂದು ಉಕ್ರೇನ್‌ನ ಪ್ರಾದೇಶಿಕ ಗವರ್ನರ್ ಓಲೆಕ್ಸಾಂಡರ್ ಪ್ರೊಕುಡಿನ್ ಕಳವಳ ವ್ಯಕ್ತಪಡಿಸಿದ್ದಾರೆ.
ನೋವಾ ಕಾಖೋವ್ಕಾ ನಗರ ಜಲಾವೃತ: ರಷ್ಯಾ ಆಕ್ರಮಿತ ನೋವಾ ಕಾಖೋವ್ಕಾ ನಗರ ಜಲಾವೃತಗೊಂಡಿದೆ. ಇದು ರಷ್ಯಾ ಪಡೆಗಳು ನಡೆಸಿರುವ 'ಇಕೋಸೈಡ್' (ಪರಿಸರ ಹತ್ಯಾಕಾಂಡ) ಎಂದು ಈ ಸ್ಫೋಟವನ್ನು ಉಕ್ರೇನ್ ಆಡಳಿತ ವ್ಯಾಖ್ಯಾನಿಸಿದೆ. ಆದರೆ, ಇದಕ್ಕೆ ಉಕ್ರೇನ್ ಹೊಣೆ ಎಂದು ರಷ್ಯಾ ಆರೋಪಿಸಿದೆ. ತನ್ನ ವಿಧ್ವಂಸಕ ಕೃತ್ಯಗಳಿಂದ ಗಮನ ಬೇರೆ ಕಡೆ ಸೆಳೆಯಲು ಉಕ್ರೇನ್ ಅಣೆಕಟ್ಟನ್ನು ಸ್ಫೋಟಿಸಿದೆ ಎಂದು ಕ್ರೆಮ್ಲಿನ್ ದೂರಿದೆ.
ಬೃಹತ್ ಅಣೆಕಟ್ಟು ಸ್ಫೋಟದಿಂದ ಸದ್ಯ ಯಾವುದೇ ನಾಗರಿಕ ಸಾವು - ನೋವುಗಳನ್ನು ಸಂಭವಿಸಿಲ್ಲ ಎಂದು ಎರಡೂ ಕಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ, ಪ್ರವಾಹ ಬರುವ ಮೊದಲು ಅನೇಕ ನಿವಾಸಿಗಳು ಅದರಿಂದ ತಪ್ಪಿಸಿಕೊಳ್ಳು ಪ್ರಯತ್ನಿಸಿದರು. ಆದರೆ, ನೀರಿನ ಮಟ್ಟ ರಸ್ತೆಗಳಲ್ಲಿ ಏರುತ್ತಿದ್ದಂತೆ ಸಿಲುಕಿದ ಜನರನ್ನು ರಾಷ್ಟ್ರೀಯ ಕಾವಲು ತಂಡ ಮತ್ತು ತುರ್ತು ಸಿಬ್ಬಂದಿ ಧಾವಿಸಿ ರಕ್ಷಿಸಿದ್ದಾರೆ.
ನದಿಯ ಪೂರ್ವ ಭಾಗದಲ್ಲಿರುವ ರಷ್ಯಾದ ನಿಯಂತ್ರಿತ ಪ್ರದೇಶಗಳಲ್ಲಿ ಪ್ರವಾಹದ ಅಪಾಯವಿರುವ ಪ್ರದೇಶಗಳಲ್ಲಿ ಸುಮಾರು 22,000 ಜನರು ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಂಗಳವಾರ 16,000 ಜನರು ಉಕ್ರೇನಿಯನ್ ಹಿಡಿತದಲ್ಲಿರುವ ಅತ್ಯಂತ ನಿರ್ಣಾಯಕ ವಲಯದಲ್ಲಿ ಸ್ಥಳಾಂತರಿಸಿದಂತಹ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕನಿಷ್ಠ 16 ಸಾವಿರ ಜನರು ಈಗಾಗಲೇ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ಸಂತ್ರಸ್ತರಿಗೆ ನೀರು, ಆಹಾರ ಸೇರಿದಂತೆ ಕಾನೂನು ಮತ್ತು ಭಾವನಾತ್ಮಕ ಬೆಂಬಲವನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಮಾನವೀಯ ದುರಂತ:ಡ್ನೀಪರ್ ನದಿಯ ಕೆಳಭಾಗದ ಪಟ್ಟಣಗಳು ಮತ್ತು ಹಳ್ಳಿಗಳು ನೀರಿನಲ್ಲಿ ಮುಳುಗುತ್ತಿವೆ. ಕಖೋವ್ಕಾ ಅಣೆಕಟ್ಟಿನ ನಾಶ ಮಾನವ ಮತ್ತು ಪರಿಸರಕ್ಕೆ ಒಂದು ದೊಡ್ಡ ಅಮಾನವೀಯ ದುರಂತವಾಗಿದೆ. ಅದಕ್ಕೆ ಕಾರಣರಾದವರನ್ನು ನ್ಯಾಯಕ್ಕೆ ತರಲು ಅಂತಾರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಪೂರ್ವದ ಪ್ರಾದೇಶಿಕ ನಿರ್ದೇಶಕರು ಹೇಳಿದರು. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ನಿಯಮಗಳು ನಿರ್ದಿಷ್ಟವಾಗಿ ಅಣೆಕಟ್ಟುಗಳನ್ನು ರಕ್ಷಿಸುತ್ತವೆ ಎಂದು ಅವರು ಹೇಳಿದರು.
ಅಣೆಕಟ್ಟು ಸ್ಫೋಟದಿಂದ ಉಂಟಾದ ಪ್ರವಾಹ ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಹೊಸ ಪ್ರದೇಶಗಳಿಗೆ ಸ್ಥಳಾಂತರಿಸುವಂತಹ ಕಾರ್ಯದ ಮೇಲೆ ತೀವ್ರವಾದ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಯುನ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ಧಾರೆ.
ಕಾಖೋವ್ಕಾ ಅಣೆಕಟ್ಟನ್ನು 2014ರಲ್ಲಿ ಮಾಸ್ಕೋ ತನ್ನ ಪ್ರದೇಶ ಎಂದು ಘೋಷಿಸಿಕೊಂಡಿತ್ತು. 2022ರ ಫೆಬ್ರವರಿ ತಿಂಗಳಲ್ಲಿ ಯುದ್ಧ ಆರಂಭಿಸಿದಾಗ ಅಣೆಕಟ್ಟನ್ನು ರಷ್ಯಾ ವಶಪಡಿಸಿಕೊಂಡಿತ್ತು. ಇದು ಮುಖ್ಯವಾಗಿ ಕ್ರಿಮಿಯಾ ಪರ್ಯಾಯ ದ್ವೀಪಕ್ಕೆ ನೀರು ಒದಗಿಸುತ್ತದೆ. ಅಣೆಕಟ್ಟು ಸ್ಫೋಟದಿಂದ ಕ್ರಿಮಿಯಾಕ್ಕೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನೋವಾ ಕಾಖೋವ್ಕಾದಲ್ಲಿನ ಕಾಖೋವ್ಕಾ ಅಣೆಕಟ್ಟನ್ನು ಗುರಿಯಾಗಿಸಿಕೊಂಡು ರಾತ್ರಿ ದಾಳಿ ನಡೆಸಲಾಗಿದೆ. ಇದರಿಂದ ಅಣೆಕಟ್ಟಿನ ಗೇಟ್ ವಾಲ್ವ್‌ಗಳು ನಾಶವಾಗಿವೆ. ಇದು ನಿಯಂತ್ರಿಸಲಾಗದಷ್ಟು ನೀರಿನ ಹರಿವಿಗೆ ಕಾರಣವಾಗಿದೆ ಎಂದು ರಷ್ಯಾ ಬೆಂಬಲಿತ ಆಡಳಿತದ ಮುಖ್ಯಸ್ಥ ವ್ಲಾಡಿಮಿರ್ ಲಿಯೋಂಟೀವ್ ಹೇಳಿದ್ದಾರೆ.
ಇದನ್ನೂ ಓದಿ:ರಷ್ಯಾ ಬಾಂಬ್ ದಾಳಿಯಿಂದ ಉಕ್ರೇನ್‌ನ ಬೃಹತ್ ಅಣೆಕಟ್ಟೆಗೆ ಹಾನಿ, ಭಾರಿ ಪ್ರವಾಹ ಸಾಧ್ಯತೆ- ವಿಡಿಯೋ