ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ):ಉತ್ತರ ಮೆಕ್ಸಿಕೊದಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ಛಾವಣಿ ಕುಸಿಯುವ ವೇಳೆ ಸುಮಾರು 30 ಮಂದಿ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಬದುಕುಳಿದಿರುವವರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಚರ್ಚ್ ಕುಸಿಯುವ ಸಂದರ್ಭ ಸುಮಾರು 100 ಜನರು ಚರ್ಚ್‌ನೊಳಗಿದ್ದರು ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ರಾಜ್ಯ ಭದ್ರತಾ ವಕ್ತಾರರ ಕಚೇರಿ ತಡವಾಗಿ ಒಂಬತ್ತು ಜನರು ಕುಸಿತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದು, ಘಟನೆಗೆ ಚರ್ಚ್‌ನ ರಚನಾತ್ಮಕ ವೈಫಲ್ಯದಿಂದ ಉಂಟಾಗಿರಬಹುದು ಎಂದು ವಿವರಿಸಿದೆ.
ರಾಷ್ಟ್ರೀಯ ಗಾರ್ಡ್, ರಾಜ್ಯ ಪೊಲೀಸ್ ಮತ್ತು ರಾಜ್ಯ ನಾಗರಿಕ ರಕ್ಷಣಾ ಕಚೇರಿ ಮತ್ತು ರೆಡ್‌ಕ್ರಾಸ್‌ನ ಘಟಕಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಟ್ಯಾಂಪಿಕೊದ ರೋಮನ್ ಕ್ಯಾಥೋಲಿಕ್ ಡಯಾಸಿಸ್‌ನ ಬಿಷಪ್ ಜೋಸ್-ಅರ್ಮಾಂಡೋ ಅಲ್ವಾರೆಜ್ ಅವರು "ಬಂದರು ನಗರವಾದ ಟ್ಯಾಂಪಿಕೊದ ಪಕ್ಕದಲ್ಲಿರುವ ಗಲ್ಫ್ ಕರಾವಳಿ ನಗರವಾದ ಸಿಯುಡಾಡ್ ಮಡೆರೊದಲ್ಲಿನ ಸಾಂಟಾ ಕ್ರೂಜ್ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಛಾವಣಿ ಕುಸಿದಿದೆ" ಎಂದು ಹೇಳಿದ್ದಾರೆ.