ಕರ್ನಾಟಕ

karnataka

ETV Bharat / international

ಶ್ರೀಲಂಕಾಗೆ ಬಂದ ಚೀನಾ ಗೂಢಚಾರ ಹಡಗು: ಭಾರತದಿಂದ ತೀವ್ರ ಪ್ರತಿರೋಧ - ಶ್ರೀಲಂಕಾ ಈಗ ಭಾರತ ಮತ್ತು ಚೀನಾ

ಚೀನಾದ ಗೂಢಚಾರಿಕೆ ಹಡಗು ಶ್ರೀಲಂಕಾದ ಕೊಲಂಬೊ ಬಂದರಿಗೆ ಆಗಮಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Chinese military warship docks
Chinese military warship docks

By

Published : Aug 11, 2023, 2:29 PM IST

ನವದೆಹಲಿ : ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಚೀನಾದ ಇಂಥದೇ ಹಡಗೊಂದು ಶ್ರೀಲಂಕಾ ಬಂದರಿನಲ್ಲಿ ಲಂಗರು ಹಾಕಿ ನಿಂತಿತ್ತು. ಈಗ ಅಂಥದೇ ಘಟನೆ ಮರುಕಳಿಸಿದೆ.

ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶನಿವಾರ ಇಲ್ಲಿಂದ ನಿರ್ಗಮಿಸಲಿದೆ. "ಕೊಲಂಬೊಗೆ ಆಗಮಿಸಿರುವ 129 ಮೀಟರ್ ಉದ್ದದ ಹಡಗಿನಲ್ಲಿ 138 ಸಿಬ್ಬಂದಿ ಇದ್ದಾರೆ ಮತ್ತು ಅದನ್ನು ಕಮಾಂಡರ್ ಜಿನ್ ಕ್ಸಿನ್ ಮುನ್ನಡೆಸುತ್ತಿದ್ದಾರೆ. ಹಡಗು ನಾಳೆ ದೇಶವನ್ನು ತೊರೆಯಲಿದೆ" ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.

ಚೀನಾದ ಹಡಗು ಲಂಕಾ ಬಂದರಿಗೆ ಆಗಮಿಸುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಶ್ರೀಲಂಕಾ ಸರ್ಕಾರ ಚೀನಾ ಹಡಗಿಗೆ ಪರವಾನಿಗೆ ನೀಡಲು ತಡ ಮಾಡಿತ್ತು. ಆದಾಗ್ಯೂ ಚೀನಾ ಹಡಗು ತನ್ನ ದೇಶದ ಬಂದರಿಗೆ ಆಗಮಿಸಲು ಅನುಮತಿ ನೀಡಿದ ಶ್ರೀಲಂಕಾ ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದೆ. ಆದರೆ ಚೀನಾ ಹಡಗು ಆಗಮಿಸಿರುವ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಗಳು ತಿಳಿಸಿವೆ.

ಕಳೆದ ವರ್ಷ ಆಗಸ್ಟ್​ನಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು 'ಯುವಾನ್ ವಾಂಗ್ 5' ದಕ್ಷಿಣ ಶ್ರೀಲಂಕಾದ ಹಂಬನ್​ತೋಟಾ ಬಂದರಿಗೆ ಆಗಮಿಸಿದಾಗ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು. ಬಾಹ್ಯಾಕಾಶದಲ್ಲಿನ ವಸ್ತುಗಳನ್ನು ಪತ್ತೆಹಚ್ಚುವ ಹೈಟೆಕ್ ಹಡಗು ಎಂದು ವಿಶ್ಲೇಷಕರಿಂದ ವಿವರಿಸಲ್ಪಟ್ಟ ಯುವಾನ್ ವಾಂಗ್ 5 ಹೆಸರಿನ ಹಡಗು ಲಂಗರು ಹಾಕುವುದಕ್ಕೆ ಭಾರತ ವಿರೋಧಿಸಿತ್ತು. ಏಷ್ಯಾ-ಯುರೋಪ್ ಮಧ್ಯದ ಮುಖ್ಯ ಹಡಗು ಮಾರ್ಗದ ಬಂದರಾಗಿರುವ ಹಂಬನ್​ತೋಟಾ ಬಂದರನ್ನು ಚೀನಾ ಮಿಲಿಟರಿ ನೆಲೆಯಾಗಿ ಬಳಸಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು.

ದಶಕಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಈಗ ಭಾರತ ಮತ್ತು ಚೀನಾ ಎರಡೂ ದೇಶಗಳ ಬೆಂಬಲ ಬಯಸುತ್ತಿದೆ. ಹೀಗಾಗಿ ಕಳೆದ ವರ್ಷದ ಆಗಸ್ಟ್ 11 ರಂದು ಚೀನಾ ಹಡಗು ಹಂಬನ್​ತೋಟಾ ಬಂದರಿಗೆ ಆಗಮಿಸಲು ಮತ್ತು ಇಂಧನ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿತ್ತು. ಆಗ ಚೀನಾ ಹಡಗು 5 ದಿನ ಅಲ್ಲಿಯೇ ಇತ್ತು. ಶ್ರೀಲಂಕಾ ಬಂದರಿಗೆ ತೆರಳುವ ನೆಪದಲ್ಲಿ ಚೀನಾ ಹಡಗು ಭಾರತೀಯ ರಕ್ಷಣಾ ನೆಲೆಗಳ ಮೇಲೆ ಗೂಢಚಾರಿಕೆ ನಡೆಸುವ ಸಾಧ್ಯತೆಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾ 2022 ರಲ್ಲಿ ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿತ್ತು. ಹೀಗಾಗಿ ಶ್ರೀಲಂಕಾ ತನ್ನ ಬಾಹ್ಯ ಸಾಲವನ್ನು ಪುನರ್​ ರಚಿಸುವ ಪ್ರಯತ್ನವಾಗಿ ಭಾರತ ಮತ್ತು ಚೀನಾ ಎರಡನ್ನೂ ಸಮಾನವಾಗಿ ಪರಿಗಣಿಸುತ್ತದೆ.

ಇದನ್ನೂ ಓದಿ : ಮುಂದಿನ ತಿಂಗಳು ನವಾಜ್​ ಶರೀಫ್ ಪಾಕಿಸ್ತಾನಕ್ಕೆ ವಾಪಸ್; ನಿರ್ಗಮಿತ ಪ್ರಧಾನಿ ಶಹಬಾಜ್

ABOUT THE AUTHOR

...view details