ಕರ್ನಾಟಕ

karnataka

ETV Bharat / international

ಶ್ರೀಲಂಕಾ ಸಮುದ್ರ ಪ್ರವೇಶಿಸಲಿದೆ ಚೀನಾದ ಮತ್ತೊಂದು ಹಡಗು; ಭಾರತದೆದುರು ಬೀಜಿಂಗ್‌ ತೋಳ್ಬಲ ಪ್ರದರ್ಶನ! - ಲಂಕಾ ಮೂಲಕ ಭಾರತದ ಮೇಲೆ ಚೀನಾ ಒತ್ತಡ

Chinese ship to enter Sri Lankan waters: ಭಾರತದೊಂದಿಗೆ ಭೂಗಡಿ ತಂಟೆ ನಡೆಸುತ್ತಿರುವ ಚೀನಾ, ಹಿಂದೂ ಮಹಾ ಸಾಗರದಲ್ಲೂ ಪಾರಮ್ಯ ಮೆರೆಯಲು ಮುಂದಾಗುತ್ತಿದೆ. ಶ್ರೀಲಂಕಾದ ಮೂಲಕ ಭಾರತದ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ.

ಶ್ರೀಲಂಕಾ ಜಲಗಡಿಗೆ ಮತ್ತೊಂದು ಚೀನೀ ಹಡಗು
ಶ್ರೀಲಂಕಾ ಜಲಗಡಿಗೆ ಮತ್ತೊಂದು ಚೀನೀ ಹಡಗು

By ETV Bharat Karnataka Team

Published : Aug 28, 2023, 3:21 PM IST

ನವದೆಹಲಿ:ತೈವಾನ್​ ದ್ವೀಪವನ್ನು ವಶಕ್ಕೆ ಪಡೆಯುವ ರಣೋತ್ಸಾಹದಲ್ಲಿರುವ ಚೀನಾ, ಇತ್ತ ಶ್ರೀಲಂಕಾ ಮೇಲೂ ಸಂಪೂರ್ಣ ಅಧಿಪತ್ಯ ಸ್ಥಾಪನೆಗೆ ಮುಂದಾಗುತ್ತಿದೆ. ಭಾರತದ ತೀವ್ರ ವಿರೋಧದ ನಡುವೆಯೂ ಮತ್ತೊಂದು ಸಂಶೋಧನಾ ಹಡಗನ್ನು ಲಂಕಾಕ್ಕೆ ಕಳುಹಿಸಲು ಬೀಜಿಂಗ್ ಮುಂದಾಗಿದೆ. ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸುವ ಉದ್ದೇಶ ಇದರ ಹಿಂದಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಲಂಕಾ ಕೂಡ ಇದಕ್ಕೆ ಅನುಮತಿಸಿದೆ. ಚೀನಾ ಹಡಗುಗಳಿಗೆ ತನ್ನ ಸಮುದ್ರ ಗಡಿಯಲ್ಲಿ ಕಾರ್ಯಾಚರಣೆಗೆ ಒಪ್ಪಿಗೆ ನೀಡುತ್ತಿರುವ ಶ್ರೀಲಂಕಾ ನಡೆಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಇದು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ಶ್ರೀಲಂಕಾದ ಮಾಧ್ಯಮಗಳ ವರದಿ ಪ್ರಕಾರ, ಅಲ್ಲಿನ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಜಲಸಂಪನ್ಮೂಲ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಚೀನಾದ ಸಂಶೋಧನಾ ನೌಕೆ ಎಂದು ಹೇಳಲಾಗುವ 'ಶಿ ಯಾನ್ 6' ಹಡಗಿಗೆ ತನ್ನ ಜಲಪ್ರದೇಶವನ್ನು ಪ್ರವೇಶಿಸಲು ಅನುಮತಿ ನೀಡಿದೆ. ಅಕ್ಟೋಬರ್‌ನಲ್ಲಿ ಹಡಗು ಕೊಲಂಬೊ ಬಂದರಿನಲ್ಲಿ ಲಂಗರು ಹಾಕುವ ನಿರೀಕ್ಷೆಯಿದೆ.

ಚೀನಾ ಧ್ವಜದಡಿಯಲ್ಲಿ ನೌಕಾಯಾನ ಮಾಡುವ ಹಡಗು 1,115 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, 90.6 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಶಿ ಯಾನ್ 6 ಹಡಗು 60 ಸಿಬ್ಬಂದಿಯನ್ನು ಹೊಂದಿರುವ ವೈಜ್ಞಾನಿಕ ಸಂಶೋಧನಾ ನೌಕೆಯಾಗಿದ್ದು, ಸಮುದ್ರಶಾಸ್ತ್ರ, ಸಮುದ್ರ ಪರಿಸರ ವಿಜ್ಞಾನ ಮತ್ತು ಭೂವಿಜ್ಞಾನ ಅಧ್ಯಯನ ನಡೆಸುತ್ತದೆ ಎಂದು ಹೇಳಲಾಗುತ್ತಿದೆ.

ಭಾರತದ ಆಕ್ಷೇಪವೇಕೆ?:ಭಾರತಕ್ಕೆ ಹತ್ತಿರವಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಚೀನಾ ಕಾರ್ಯಾಚರಣೆಗಳು ದೇಶದ ಭದ್ರತೆಗೆ ಆತಂಕ ಉಂಟುಮಾಡುವ ವಿಚಾರ. ಈ ಬಗ್ಗೆ ಲಂಕಾದ ನಿರ್ಧಾರಗಳಿಗೆ ಭಾರತ ಸರ್ಕಾರ ನೇರ ಆಕ್ಷೇಪ ಎತ್ತಿ ಪ್ರತಿಭಟಿಸಿದೆ. ಚೀನಾ ಸಮುದ್ರ ಅಧ್ಯಯನ ನಡೆಸುವ ಹಡಗುಗಳು ಎಂದು ಹೇಳಲಾದ ನೌಕೆಗಳು ಯುದ್ಧ ನೌಕೆಗಳಾಗಿವೆ. ಈ ಹಿಂದೆಯೂ ಹಾವೊ ಯಾಂಗ್ 24 ನೌಕೆಗೆ ಇದೇ ರೀತಿ ಅನುಮತಿಸಲಾಗಿತ್ತು. ಆದರೆ, ಅದೂ ಕೂಡಾ ಯುದ್ಧನೌಕೆಯೇ ಆಗಿತ್ತು. 129 ಮೀಟರ್ ಉದ್ದದ ಹಡಗನ್ನು 138 ಸಿಬ್ಬಂದಿ ನಿರ್ವಹಿಸುತ್ತಿದ್ದು, ಕಮಾಂಡರ್ ಜಿನ್ ಕ್ಸಿನ್ ಅವರ ನೇತೃತ್ವದಲ್ಲಿ ಕೊಲಂಬೊದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ನಡೆಸುವ ಕಾರ್ಯಾಚರಣೆಯ ಪ್ರದೇಶವು ಭಾರತದ ಪ್ರಭಾವದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಯಾವುದೇ ಬೆಳವಣಿಗೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಅವುಗಳನ್ನು ವಿರೋಧಿಸುವ ಮತ್ತು ಪ್ರತಿಭಟಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.

ಕಳೆದ ವರ್ಷವೂ ಚೀನಾದ ಯುವಾನ್ ವಾಂಗ್ 5 ಎಂಬ ಸಮೀಕ್ಷಾ ನೌಕೆ ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಲು ಒಪ್ಪಿಗೆ ನೀಡಿದಾಗ ಭಾರತ ವಿರೋಧ ವ್ಯಕ್ತಪಡಿಸಿತ್ತು. ಹಡಗನ್ನು ಸಂಶೋಧನೆ ಮತ್ತು ಸಮೀಕ್ಷಾ ನೌಕೆ ಎಂದು ಹೇಳಲಾಗಿದ್ದರೂ, ಭದ್ರತಾ ವಿಶ್ಲೇಷಕರು ಅದನ್ನು ರಾಕೆಟ್, ಕ್ಷಿಪಣಿ ಉಡಾವಣೆಗಳ ಮೇಲ್ವಿಚಾರಣೆ ಮಾಡುವ ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್ ಎಲೆಕ್ಟ್ರಾನಿಕ್ಸ್‌ನಿಂದ ಕೂಡಿದೆ ಎಂದು ಎಚ್ಚರಿಸಿದ್ದರು. ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೇಶದಿಂದ ಪಲಾಯನ ಮಾಡುವ ಒಂದು ದಿನದ ಮೊದಲು ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಈ ಹಡಗು ದೇಶಕ್ಕೆ ಬರಲು ಅನುಮತಿ ನೀಡಿದ್ದರು.

ಇದನ್ನೂ ಓದಿ:ಬೈಕ್​ ಕದ್ದ ಆರೋಪ: ಯುವಕನ ಬಡಿದು ಕೊಂದ ಉದ್ರಿಕ್ತರ ಗುಂಪು.. ಆದರೆ ಅಸಲಿ ಕತೆಯೇ ಬೇರೆ!

ABOUT THE AUTHOR

...view details