ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಚೀನಾ-ಯುಎಸ್ ಶೃಂಗಸಭೆ ಮತ್ತು 30ನೇ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್) ವೇದಿಕೆಯ ನಾಯಕರ ಸಭೆಯ ಅಂಗವಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬುಧವಾರ ಸ್ಯಾನ್ ಫ್ರಾನ್ಸಿಸ್ಕೋದ ಕೊಲ್ಲಿ ಪ್ರದೇಶದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಎಂದು ಯುಎಸ್ ಆಡಳಿತದ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ತಪ್ಪುಗ್ರಹಿಕೆಗಳನ್ನು ತೊಡೆದುಹಾಕಲು ಮತ್ತು ಎರಡು ಶಕ್ತಿಯುತ ರಾಷ್ಟ್ರಗಳ ನಡುವಿನ ಯಶಸ್ವಿ ಸ್ಪರ್ಧಾತ್ಮಕ ಸಂಬಂಧಗಳನ್ನು ನಿರ್ವಹಿಸುವ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಉಭಯ ನಾಯಕರು ಆಶಿಸುತ್ತಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಶೃಂಗದ ಮಹತ್ವ ತಿಳಿಸಿದ್ದಾರೆ. ಇದಲ್ಲದೆ, ಬೈಡನ್ ಅವರ ಮಿತ್ರರಾಷ್ಟ್ರಗಳು ವಾಸ್ತವಿಕ ನಿರೀಕ್ಷೆಗಳೊಂದಿಗೆ ಶೃಂಗಸಭೆಗೆ ಪ್ರವೇಶಿಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಇಸ್ರೇಲ್ - ಹಮಾಸ್ ಯುದ್ಧ : ಮಾನವೀಯ ವಿರಾಮಕ್ಕೆ ಕರೆ ನೀಡಿದ ಜೋ ಬೈಡನ್
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಂತೆ ಮತ್ತು ಉಕ್ರೇನ್‌ನಲ್ಲಿ ಯುದ್ಧವು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಜಾಗತಿಕ ಬಿಕ್ಕಟ್ಟು ಸಂಭವಿಸುವುದನ್ನು ತಡೆಯಲು ಬೈಡನ್ ಉತ್ಸುಕರಾಗಿದ್ದಾರೆ. ಹೆಚ್ಚುವರಿಯಾಗಿ, ಜಾಗತಿಕ ಉದ್ವಿಗ್ನತೆಗಳು ಹೆಚ್ಚುತ್ತಿರುವಾಗಲೂ ವಾಷಿಂಗ್ಟನ್-ಬೀಜಿಂಗ್ ಸಂಬಂಧಗಳಲ್ಲಿ ಸ್ಥಿರತೆಯನ್ನು ಪುನಃಸ್ಥಾಪಿಸುವುದು ಅವರ ಪ್ರಮುಖ ವಿದೇಶಾಂಗ ನೀತಿಯ ಆದ್ಯತೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:ಭಾರತೀಯ ಮಕ್ಕಳು ಸ್ಪೈಡರ್ಮ್ಯಾನ್ ವೇಷ ಧರಿಸಿದ್ರೆ, ಅಮೆರಿಕ ಯುವಕರು ನಾಟುನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ : ಪ್ರಧಾನಿ ಮೋದಿ
ಹಾಗೆಯೇ, ಉಭಯ ದೇಶಗಳ ನಡುವೆ ಮಿಲಿಟರಿ ಸಂವಹನವನ್ನು ಮರುಸ್ಥಾಪಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಈ ವಿಚಾರದಲ್ಲಿ ಜಿನ್‌ಪಿಂಗ್ ಮೇಲೆ ಒತ್ತಡ ಹೇರುವುದು ಬೈಡನ್ ಅವರ ಮುಖ್ಯ ಉದ್ದೇಶ. ಇಸ್ರೇಲ್ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷ, ಹವಾಮಾನ ಬದಲಾವಣೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸಮಸ್ಯೆ, ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಈ ಮಧ್ಯೆ, ಇಸ್ರೇಲ್-ಹಮಾಸ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧ ಎರಡರಲ್ಲೂ ಹೆಚ್ಚು ರಚನಾತ್ಮಕ ಪಾತ್ರವನ್ನು ವಹಿಸುವಂತೆ ಯುಎಸ್ ಚೀನಾದ ಮೇಲೆ ಒತ್ತಡ ಹೇರಿದೆ.
ಇದನ್ನೂ ಓದಿ:ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ, ಬೇರೆ ಉಗ್ರರ ಗುಂಪಿನಿಂದ ಕೃತ್ಯ: ಅಮೆರಿಕದ ಅಧ್ಯಕ್ಷ ಜೋ ಬೈಡನ್