ಬೀಜಿಂಗ್: ತೈವಾನ್ ಸುತ್ತಲೂ ಆರು ವಲಯಗಳಲ್ಲಿ ತನ್ನ ನೌಕಾಪಡೆ, ವಾಯುಪಡೆ ಮತ್ತು ಇತರ ಮಿಲಿಟರಿ ಪಡೆಗಳು ಮಿಲಿಟರಿ ಡ್ರಿಲ್ ಮುಂದುವರೆಸಿವೆ ಎಂದು ಚೀನಾ ಹೇಳಿದೆ. ಇದೇ ವಾರ ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ದ್ವೀಪರಾಷ್ಟ್ರ ತೈವಾನ್ಗೆ ಭೇಟಿ ನೀಡಿದ್ದರಿಂದ ಆಕ್ರೋಶಗೊಂಡ ಚೀನಾ ಮಿಲಿಟರಿ ಡ್ರಿಲ್ ಆರಂಭಿಸಿದೆ.
ಸ್ವಯಂ-ಆಡಳಿತ ಹೊಂದಿರುವ ದ್ವೀಪ ಗಣರಾಜ್ಯ ತೈವಾನ್ ಮೇಲೆ ತಾನು ದಾಳಿ ಮಾಡುವ ಸಾಧ್ಯತೆಗಳಿವೆ ಎಂಬ ಸಂದೇಶವನ್ನು ಜಗತ್ತಿಗೆ ಪ್ರಚಾರ ಮಾಡಲು ಚೀನಾ ಈ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದೆ. ನಿರ್ಬಂಧ ವಿಧಿಸುವುದು, ಸಮುದ್ರದಲ್ಲಿನ ಗುರಿಗಳನ್ನು ಹೊಡೆದುರುಳಿಸುವುದು, ಭೂಪ್ರದೇಶದ ಮೇಲೆ ದಾಳಿ ಮಾಡುವುದು ಮತ್ತು ವಾಯು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶಗಳಿಗಾಗಿ ಚೀನಾ ಮಿಲಿಟರಿ ಜಂಟಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನುವಾ ವರದಿ ಮಾಡಿದೆ.