ಬೀಜಿಂಗ್ (ಚೀನಾ):ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಚೀನಾ ದೇಶದ ಮೀನುಗಾರಿಕೆಯ ದೋಣಿ ಮುಳುಗಿದ್ದು, 39 ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಸಿಜಿಟಿಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಕಣ್ಮರೆಯಾದ ಸಿಬ್ಬಂದಿ ಪೈಕಿ 17 ಚೀನಾ, 17 ಇಂಡೋನೇಷ್ಯಾ ಮತ್ತು ಐವರು ಫಿಲಿಪ್ಪೀನ್ಸ್ ದೇಶದ ಪ್ರಜೆಗಳು ಎಂದು ತಿಳಿದುಬಂದಿದೆ.
ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 3 ಗಂಟೆ ವೇಳೆಗೆ (ಬೀಜಿಂಗ್ ಕಾಲಮಾನ) ಘಟನೆ ನಡೆದಿದೆ. ತಕ್ಷಣ ರಕ್ಷಣಾ ವ್ಯವಸ್ಥೆ ಮಾಡುವಂತೆ ಹಾಗೂ ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲು ತುರ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಲು ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ, ಸಾರಿಗೆ ಸಚಿವಾಲಯ ಮತ್ತು ಶಾಂಡಾಂಗ್ ಪ್ರಾಂತ್ಯಕ್ಕೆ ಕ್ಸಿ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.