ಬಿಜೀಂಗ್: ಸತತ ಎರಡನೇ ವರ್ಷವೂ ಚೀನಾ ದೇಶದ ಜನಸಂಖ್ಯೆ ಕುಸಿತ ಕಂಡಿದೆ. ಹೊಸ ಜನನ ದರದಲ್ಲೂ ಭಾರಿ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೋ (ಎನ್ಬಿಎಸ್) ಪ್ರಕಟಿಸಿದೆ.
ಎನ್ಬಿಸಿ ವರದಿ ಪ್ರಕಾರ, 2023ರಲ್ಲಿ ಜನಸಂಖ್ಯೆ 1,409 ಬಿಲಿಯನ್ ಇತ್ತು. ಇದೀಗ ಕಳೆದ ವರ್ಷಕ್ಕಿಂತ 2.08 ಮಿಲಿಯನ್‌ಗಳಷ್ಟು ಕುಸಿದಿದೆ. ಜನನ ದರವೂ ಕುಸಿದಿದ್ದು, ಹೊಸ ವರದಿಯಂತೆ 1,000 ಜನರಿಗೆ 6.39 ಜನನ ಪ್ರಮಾಣವಿದೆ. ಕಳೆದ ವರ್ಷ ಈ ದರ 6.77ರಷ್ಟಿತ್ತು. 1949ರ ಬಳಿಕ ಅತ್ಯಂತ ಕಡಿಮೆ ಜನನ ದರ ಈ ಬಾರಿ ದಾಖಲಾಗಿದೆ.
2023ರಲ್ಲಿ 9.2 ಮಿಲಿಯನ್ ಮಕ್ಕಳು ಜನಿಸಿದರೆ, 2022ರಲ್ಲಿ 9.56 ಮಿಲಿಯನ್ ಮಕ್ಕಳು ಜನಿಸಿದ್ದರು. 2022ರಿಂದ ಮೊದಲ ಬಾರಿಗೆ ಚೀನಾ ಜನಸಂಖ್ಯೆ ತಗ್ಗಿದೆ. ಜನಸಂಖ್ಯೆ ವಿಪರೀತ ಹೆಚ್ಚಿದ ಹಿನ್ನೆಲೆಯಲ್ಲಿ 1980ರಲ್ಲಿ ಚೀನಾ ಸರ್ಕಾರ ಕಟ್ಟುನಿಟ್ಟಿನ 'ಒಂದು ಮಗು ಕಾನೂನ' ಜಾರಿಗೆ ತಂದಿತ್ತು. ದುಡಿಯುವ ವರ್ಗದ ಸಂಖ್ಯೆ ಕ್ಷೀಣಿಸಿದ ಕಾರಣ ಈ ನಿಯಮವನ್ನು ಸಡಿಲಿಸಿದ ಸರ್ಕಾರ 2021ರಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು.
ಜನಸಂಖ್ಯೆ ಕುಸಿತಕ್ಕೆ ಕಾರಣವೇನು?: ಜೀವನ ಮಟ್ಟದ ಸುಧಾರಣೆ, ಮಹಿಳೆಯರ ಉದ್ಯೋಗ ಮತ್ತು ಉನ್ನತ ಶಿಕ್ಷಣ ಜನನ ದರ ಇಳಿಕೆಗೆ ಕಾರಣವಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆ ಕುಸಿತ ಕಾಣುತ್ತಿದ್ದು, ಇದನ್ನು ಹಳೆಯ ಮಾದರಿಗೆ ಮರಳಿಸುವುದು ಕಷ್ಟಸಾಧ್ಯವಾಗಿದೆ. ಚೀನಾದಲ್ಲಿ ಸಂತಾನಕ್ಕೆ ಪ್ರೋತ್ಸಾಹ ನೀಡಿದರೂ ಯುವ ಪೀಳಿಗೆ ತಮ್ಮ ಮನಸ್ಥಿತಿ ಬದಲಾಯಿಸಿದ್ದಾರೆ. ಅವರು ಮಗು ಹೊಂದಲು ಒಲವು ಹೊಂದಿಲ್ಲ ಎಂದು ಜನಸಂಖ್ಯಾಶಸ್ತ್ರಜ್ಞರು ತಿಳಿಸಿದ್ದಾರೆ.
ವಿಶ್ಲೇಷಕರ ಪ್ರಕಾರ, 1967ರಲ್ಲಿ ಚೀನಾದಲ್ಲಿ ಉಂಟಾದ ಕ್ಷಾಮದಲ್ಲಿ ಮಿಲಿಯಗಟ್ಟಲೆ ಜನರು ಸಾವನ್ನಪ್ಪಿದ ಬಳಿಕ ಕಳೆದೆರಡು ವರ್ಷದಿಂದ ಜನಸಂಖ್ಯೆ ಕುಸಿತ ಕಂಡಿದೆ.
ಆರ್ಥಿಕತೆ ಮೇಲೆ ಪರಿಣಾಮ:ಚೀನಾದಲ್ಲಿ ದುಡಿಯುವ ವರ್ಗದ ಜನರು 16ರಿಂದ 59 ವರ್ಷದವರಾಗಿದ್ದು, ಈ ಸಂಖ್ಯೆ 2022ರಲ್ಲಿ 10.76 ಮಿಲಿಯನ್ ಕುಸಿತವಾಗಿದೆ. 2022ರಲ್ಲಿ ದೇಶದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 16.93 ಮಿಲಿಯನ್ ಇತ್ತು. ಜನಸಂಖ್ಯೆ ಕುಸಿತ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾಕ್ಕೆ ಅನೇಕ ಸವಾಲುಗಳನ್ನು ತಂದೊಡ್ಡಿದೆ. ಇದು ದುಡಿಯುವ ವರ್ಗ, ಗ್ರಾಹಕರ ವೆಚ್ಚ ಕಡಿತ ಮತ್ತು ಸಾಮೂಹಿಕ ಭದ್ರತೆಯ ಒತ್ತಡವನ್ನು ಹೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾದಲ್ಲಿ ಜನಸಂಖ್ಯೆ 2016ರಿಂದ ಕುಸಿತ ಕಾಣುತ್ತಿದೆ. ಮಕ್ಕಳನ್ನು ಬೆಳೆಸುವುದು ವೆಚ್ಚದಾಯಕವಾಗಿದ್ದು, ಜನರ ಜೀವನ ಶೈಲಿಯಲ್ಲಾದ ಬದಲಾವಣೆ, ಸ್ವತಂತ್ರ ಜೀವನ ನಿರ್ವಹಣೆಗಳು ಇದಕ್ಕೆ ಕೊಡುಗೆ ನೀಡಿವೆ. 2020 ಮತ್ತು 2022ರ ಬಳಿಕದ ಶೂನ್ಯ ಕೋವಿಡ್ ನಿಯಮವೂ ಪರಿಣಾಮ ಬೀರಿದೆ.(ಐಎಎನ್ಎಸ್)
ಇದನ್ನೂ ಓದಿ: China: ಚೀನಾದಲ್ಲಿ ಕುಸಿಯುತ್ತಿದೆ ಮದುವೆಗಳ ಸಂಖ್ಯೆ; ದೇಶದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮದ ಚಿಂತೆ